ದರೋಡೆ ಆದ ಬ್ಯಾಂಕ್‌ಗೆ ಮುಗಿಬಿದ್ದ ಗ್ರಾಹಕರು! ಕಳೆದ ಬಾರಿ ದರೋಡೆ ಆದಾಗ ಹಣ ನೀಡದ ಬ್ಯಾಂಕ್‌

Published : Jan 19, 2025, 11:06 AM IST
The thief who stole the money and gold paid it back in one month

ಸಾರಾಂಶ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ. ರೋಡ್ ಶಾಖೆ ದರೋಡೆ ಪ್ರಕರಣದಿಂದಾಗಿ ದಿಗಿಲುಗೊಂಡಿರುವ ಚಿನ್ನ ಅಡ ಇಟ್ಟಿರುವ ಮಹಿಳೆಯರು ಹಾಗೂ ಇತರ ಗ್ರಾಹಕರು ಶನಿವಾರ ಬೆಳಗ್ಗೆ ಬ್ಯಾಂಕ್‌ಗೆ ಮುಗಿ ಬಿದ್ದಿದ್ದರು.

ಉಳ್ಳಾಲ : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ. ರೋಡ್ ಶಾಖೆ ದರೋಡೆ ಪ್ರಕರಣದಿಂದಾಗಿ ದಿಗಿಲುಗೊಂಡಿರುವ ಚಿನ್ನ ಅಡ ಇಟ್ಟಿರುವ ಮಹಿಳೆಯರು ಹಾಗೂ ಇತರ ಗ್ರಾಹಕರು ಶನಿವಾರ ಬೆಳಗ್ಗೆ ಬ್ಯಾಂಕ್‌ಗೆ ಮುಗಿ ಬಿದ್ದಿದ್ದರು. ಹೀಗಾಗಿ ಬ್ಯಾಂಕ್‌ ಮುಂಭಾಗ ಜನಜಂಗುಳಿ ಕಂಡು ಬಂತು. ನಮ್ಮ ಚಿನ್ನ ನಮಗೆ ವಾಪಾಸ್‌ ಕೊಡಿ ಎಂದು ಆಗ್ರಹಿಸಿದರು.

ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು, ಮನೆ ಖರೀದಿ ಹೀಗೆ ವಿವಿಧ ಕಾರಣಗಳಿಗಾಗಿ ಚಿನ್ನ ಅಡವಿಟ್ಟು ಹಣ ಪಡೆದಿದ್ದೇವೆ ಎಂದ ಗ್ರಾಹಕರು, ಕಳೆದ ಬಾರಿ ಇದೇ ಬ್ಯಾಂಕಿನಲ್ಲಿ ಚಿನ್ನ ಕಳೆದುಕೊಂಡಾಗ ಬ್ಯಾಂಕ್ ಪರಿಹಾರ ನೀಡಿಲ್ಲ. ಈ ಬಾರಿ ಅದೇ ರೀತಿ ಆಗಬಾರದು, ನಮ್ಮ ಚಿನ್ನ ಹಿಂದಿರುಗಿಸಿ ಕೊಡಿ ಎಂದು ಮಹಿಳೆಯರು ಆಗ್ರಹಿಸಿದರು.

₹10-12 ಕೋಟಿ ಚಿನ್ನ ದರೋಡೆ ಸ್ಪಷ್ಟ-ಬ್ಯಾಂಕ್ ಅಧ್ಯಕ್ಷ:

ಮಂಗಳೂರು ಪೊಲೀಸ್‌ ಕಮೀಷನರ್ 4 ಕೋಟಿಗಿಂತ ಹೆಚ್ಚು ಹೋಗಿರಬಹುದು ಅಂದಿದ್ದಾರೆ. ಆದರೆ ಈವರೆಗೆ ನಮ್ಮ ಪ್ರಕಾರ 10-12 ಕೋಟಿ ರು. ಮೌಲ್ಯದ ಚಿನ್ನ ದರೋಡೆಯಾಗಿದೆ. ಮಹಜರು ನಂತರ ನಿಖರ ಮಾಹಿತಿ ಸಿಗಲಿದೆ. ಇದರಲ್ಲಿ ನಮ್ಮ ಯಾವುದೇ ಸಿಬ್ಬಂದಿ ಭಾಗಿಯಾಗಿಲ್ಲ. ನಾವು ಗ್ರಾಹಕರ ಚಿನ್ನ ವಾಪಸ್ ಕೊಡುತ್ತೇವೆ ಎಂದು ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

2017ರಲ್ಲಿ ಬ್ಯಾಂಕ್ ನಿರ್ದೇಶಕಿ ಒಬ್ಬರ ಪತಿ ದರೋಡೆ ಮಾಡಿದ್ದರು. ಸದ್ಯ ನಮಗೆ ಅವರ ಮೇಲೂ ಅನುಮಾನ ಇದೆ. ಈ ಬಗ್ಗೆ ನಾವು ಪೊಲೀಸರಿಗೆ ಸೂಕ್ತ ಮಾಹಿತಿ ನೀಡಿದ್ದೇವೆ. ಈಗಿನ ಬ್ಯಾಂಕ್ ಆಡಳಿತ, ಸಿಬ್ಬಂದಿ ಕೈವಾಡ ಇಲ್ಲ ಎಂದರು.

2 ಕಾರುಗಳಲ್ಲಿ ದರೋಡೆಕೋರರು ಪರಾರಿ?

ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಗಳು ಎರಡು ತಂಡಗಳಾಗಿ ಒಂದು ಕಾರು ಕೇರಳ ಕಡೆಗೆ ಹಾಗೂ ಇನ್ನೊಂದು ಕಾರು ಮಂಗಳೂರು ಮಾರ್ಗವಾಗಿ ಬಿ.ಸಿ.ರೋಡ್ ಮೂಲಕ ತೆರಳಿರುವ ಶಂಕೆ ತನಿಖಾ ತಂಡಗಳಿಂದ ವ್ಯಕ್ತವಾಗಿದೆ.

ಈ ನಡುವೆ ದರೋಡೆಕೋರರ ಪತ್ತೆಗೆ ಪೊಲೀಸ್ ಇಲಾಖೆಯಿಂದ ಐದು ತನಿಖಾ ತಂಡ ರಚಿಸಲಾಗಿದೆ. ಮಂಗಳೂರು ದಕ್ಷಿಣ ಎಸಿಪಿ, ಸುರತ್ಕಲ್, ಕಾವೂರು, ಉಳ್ಳಾಲ ಮತ್ತು ಸಿಸಿಬಿ ಪೊಲೀಸ್ ತಂಡಗಳು ದರೋಡೆಕಾರರ ಹಿಂದೆ ಬಿದ್ದಿದೆ.

ಸಿಸಿಟಿವಿಯಲ್ಲಿ ಬ್ಯಾಂಕ್ ಎದುರುಗಡೆ ಸಿಕ್ಕ ದೃಶ್ಯದಲ್ಲಿ ಐದು ಮಂದಿಯೂ ನಗದು-ಚಿನ್ನಾಭರಣ ಸಮೇತ ಕಾರಿನಲ್ಲಿ ಪರಾರಿಯಾಗುವುದು ಪತ್ತೆಯಾದರೆ, ತಲಪಾಡಿ ಟೋಲ್‌ನಲ್ಲಿ ಸಿಕ್ಕ ದೃಶ್ಯದಲ್ಲಿ ಕಾರಿನಲ್ಲಿ ಓರ್ವನೇ ಇರುವುದು ಕಂಡುಬಂದಿದೆ.

ದರೋಡೆ ತಂಡದ ಕಾರಿನಿಂದ ಸುಂಕ ಪಡೆದಿರುವ ಟೋಲ್ ಸಿಬ್ಬಂದಿ ಪ್ರಕಾರ ಕಾರಿನಲ್ಲಿ ಓರ್ವ ಹಿಂದುಗಡೆ ಕುಳಿತಿದ್ದರೆ, ಇನ್ನೋರ್ವ ಚಲಾಯಿಸುತ್ತಿದ್ದಿರುವುದನ್ನು ಗಮನಿಸಿದ್ದಾರೆ. ಹಾಗಾಗಿ ಒಂದು ಕಾರು ತಲಪಾಡಿ ಮಾರ್ಗವಾಗಿ ಕೇರಳ ಹೊಸಂಗಡಿಯತ್ತ ತೆರಳಿ ಅಲ್ಲಿಂದ ಎಡಕ್ಕೆ ತಿರುಗಿದ್ದು ತಿಳಿದು ಬಂದಿದೆ. ಹೀಗಾಗಿ ತಂಡ ಕೇರಳಕ್ಕೆ ತೆರಳಿರುವ ಸಾಧ್ಯವಿದೆ. ಇನ್ನೂ ನಾಲ್ವರು ಆರೋಪಿಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆ.ಸಿ.ರೋಡ್‌ನಿಂದ ತಲಪಾಡಿವರೆಗೆ ಸಿಸಿಟಿವಿ ಇಲ್ಲದ ಕಡೆ ಕಾರಿನಿಂದ ಬೇರೊಂದು ಕಾರಿಗೆ ಬದಲಾವಣೆಗೊಂಡು ಚಿನ್ನದೊಂದಿಗೆ ಮಂಗಳೂರು ಮಾರ್ಗವಾಗಿ ಬಿ.ಸಿ. ರೋಡ್ ಮೂಲಕ ತೆರಳಿರುವ ಶಂಕೆ ಇದೆ.

ತನಿಖೆ ಹಾದಿ ತಪ್ಪಿಸುವ ಪ್ಲ್ಯಾನ್

ಒಂದು ಕಾರನ್ನು ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿ ಒಂದೇ ಕಾರಿನಲ್ಲಿ ಕೆ.ಸಿ.ರೋಡ್‌ಗೆ ತೆರಳಿದ್ದ ತಂಡ, ಕೃತ್ಯ ಮುಗಿಸಿ ನಾಲ್ವರನ್ನು ತಲಪಾಡಿ ಬಳಿ ಪಾರ್ಕ್ ಮಾಡಿದ್ದ ಕಾರಿನ ಬಳಿ ಇಳಿಸಿರುವ ಶಂಕೆಯಿದೆ. ಬಳಿಕ ಚಿನ್ನದ ಮೂಟೆ ಹೊಂದಿದ್ದ ಗೋಣಿಗಳ ಸಹಿತ ಇಬ್ಬರು ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ತೆರಳಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆ ದಾರಿ ತಪ್ಪಿಸಲೆಂದೇ ಇಂತಹ ಚಿತ್ರಣ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.

Recommended Stories

ಡಿ.20ರಿಂದ ಕರಾವಳಿ ಉತ್ಸವ: 6 ಬೀಚ್‍ಗಳಲ್ಲಿ ಕಾರ್ಯಕ್ರಮ
ಮಾರ್ಚ್‌ನಲ್ಲಿ ಮಂಗಳೂರು ವಿ.ವಿ 44 ನೇ ವಾರ್ಷಿಕ ಘಟಿಕೋತ್ಸವ