ನಂಬಿದವರೇ ಕೈಕೊಟ್ಟರು, ಈಗ ಒಬ್ಬಂಟಿ : ಸಮೀರ್‌ ತಪ್ಪೊಪ್ಪಿಗೆ

Published : Sep 13, 2025, 05:24 AM IST
Yutuber Sameer

ಸಾರಾಂಶ

ಈ ಹಿಂದೆ ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ ಬಗ್ಗೆ ಎಐ ವಿಡಿಯೋ ಮಾಡಿ, ಕಣ್ಣಿಗೆ ಕಟ್ಟಿದಂತೆ ಕತೆ ಕಟ್ಟಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಈಗ ಮತ್ತೊಂದು ವಿಡಿಯೋ ಮಾಡಿ, ತನ್ನ ಕಣ್ಣೀರ ಕಥೆಯನ್ನು ಹೇಳಿಕೊಂಡಿದ್ದಾನೆ.

 ಮಂಗಳೂರು/ಬೆಳ್ತಂಗಡಿ :  ಈ ಹಿಂದೆ ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ ಬಗ್ಗೆ ಎಐ ವಿಡಿಯೋ ಮಾಡಿ, ಕಣ್ಣಿಗೆ ಕಟ್ಟಿದಂತೆ ಕತೆ ಕಟ್ಟಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಈಗ ಮತ್ತೊಂದು ವಿಡಿಯೋ ಮಾಡಿ, ತನ್ನ ಕಣ್ಣೀರ ಕಥೆಯನ್ನು ಹೇಳಿಕೊಂಡಿದ್ದಾನೆ. ‘ಎಸ್‌ಐಟಿ ವಿಚಾರಣೆ ನಂತರ ನಾನು ಮನೆ ಕಳೆದುಕೊಂಡೆ. ಇರಲು ಮನೆಯೂ ಇಲ್ಲದೆ ಅನಾಥನಾದೆ. ನಾನು ನಂಬಿದವರು ನನ್ನ ಕೈಬಿಟ್ಟಿದ್ದು, ನಾನೀಗ ಒಬ್ಬಂಟಿಯಾಗಿದ್ದೇನೆ’ ಎಂದು ಅಳಲು ತೋಡಿಕೊಂಡಿದ್ದಾನೆ.

ಸುಜಾತಾ ಭಟ್‌ ಸಂದರ್ಶನ, ಅವರ ಕಣ್ಣೀರು ನೋಡಿ ಅವರ ಬಗ್ಗೆ ವಿಡಿಯೋ ಮಾಡಿದ್ದೆ. ಆದರೆ, ಈಗ ಆ ಕಣ್ಣೀರೇ ಸುಳ್ಳು ಅಂದರೆ ನಾನು ಏನು ಮಾಡಲಿ? ಎಂದೂ ಅಲವತ್ತುಕೊಂಡಿದ್ದಾನೆ.

ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ ಬಗ್ಗೆ ಎಐ ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ಪೊಲೀಸರು ಸಮೀರ್‌ನನ್ನು ವಿಚಾರಣೆ ನಡೆಸಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹುಲ್ಲಹಳ್ಳಿ ಸಮೀಪದ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿನ ಆತನ ಬಾಡಿಗೆ ಮನೆಗೆ ಭೇಟಿ ನೀಡಿ, ಸ್ಥಳ ಮಹಜರು ನಡೆಸಿದ್ದರು. ಆ ಬಳಿಕ, ತಾನು ಸಂಕಷ್ಟಕ್ಕೆ ಈಡಾಗಿದ್ದಾಗಿ ಆತ ಹೇಳಿಕೊಂಡಿದ್ದಾನೆ.

ಇದೀಗ ಯೂಟ್ಯೂಬ್‌ನಲ್ಲಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ‘ಪ್ರಾಮಾಣಿಕವಾಗಿ ನಾನು ಹೇಳ್ತಿದ್ದೇನೆ. ಇವತ್ತು ನನಗೆ ಮನೆ ಇಲ್ಲ. ಯಾವುದೋ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇದ್ವಿ. ಆದರೆ, ಪೊಲೀಸರು ತನಿಖೆಗೆ ಅಂತಾ ಮನೆಗೆ ಬಂದರು. ಇದಾದ ನಂತರ ಮನೆಯ ಮಾಲೀಕರು ನಮ್ಮನ್ನು ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇವತ್ತು ಸಮೀರ್ ಎಂ.ಡಿ. ಅಂದರೆ ಯಾರೂ ಮನೆ ಕೊಡ್ತಿಲ್ಲ. ಸಮೀರ್ ಎಂ.ಡಿ. ಅಂದರೆ ಜನ ಹೆದರಿಕೊಳ್ಳುತ್ತಿದ್ದಾರೆ. ನನಗೀಗ ಬಾಡಿಗೆ ಮನೆಯೇ ಸಿಗ್ತಿಲ್ಲ. ಹೀಗಾಗಿ, ಇಂದು ನನಗೆ ಇರೋದಕ್ಕೆ ಮನೆಯೇ ಇಲ್ಲ. ನಾನು, ನನ್ನ ತಾಯಿ ಮನೆಯಿಲ್ಲದೆ ಅಲೆದಾಡುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾನೆ.

‘ಕಳೆದ ಒಂದೂವರೆ ತಿಂಗಳಿಂದ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ನನಗೆ ವಿದೇಶದಿಂದ ಫಂಡ್ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತೆಗೆದುಕೊಂಡಿದ್ದರೆ ತನಿಖೆಯಿಂದ ಹೊರ ಬರುತ್ತಿತ್ತು. ಪೊಲೀಸರಿಗೆ ನನ್ನ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪ ಮಾಡುವವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ’ ಎಂದಿದ್ದಾನೆ.

‘ಇಲ್ಲಿ ಗಟ್ಟಿಯಾಗಿ ನ್ಯಾಯದ ಪರ ನಿಂತರೆ ಎಲ್ಲರಿಗೂ ಇದೇ ಪರಿಸ್ಥಿತಿ ಬರುತ್ತದೆ. ನಾನು ಸತ್ಯ, ನ್ಯಾಯದ ಪರವಾಗಿ ಹೋರಾಟ ಮಾಡಿದ್ದೇನೆ. ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲಿ ಎಂದು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೇನೆ. ಆ ತಾಯಿಯ ಕಣ್ಣೀರನ್ನು ನೋಡಿ, ಸುಜಾತಾ ಭಟ್‌ ಬಗ್ಗೆ ನಾನು ವಿಡಿಯೋ ಮಾಡಿದ್ದೆ. ಅವರ ಇಂಟರ್‌ವ್ಯೂ ನೋಡಿ, ಅವರ ಕಣ್ಣೀರು ನೋಡಿ, ಅದರ ಬಗ್ಗೆ ವಿಡಿಯೋ ಮಾಡಿದ್ದೆ. ಆದರೆ, ಈಗ ಆ ಕಣ್ಣೀರೇ ಸುಳ್ಳು ಅಂದರೆ ನಾನು ಏನು ಮಾಡಲಿ? ನನ್ನ ವಿಡಿಯೋನೇ ಸುಳ್ಳು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಪೊಲೀಸರ ಯುಡಿಆರ್ ರಿಪೋರ್ಟ್ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನು ಸಾಯಿಸಿದ್ದು ಯಾರು? ನಮ್ಮವರೇ ನನಗೆ ಕೈಕೊಟ್ಟರು. ಅವರನ್ನು ನಂಬಿ ನಾನೀಗ ಮೋಸ ಹೋದೆ ಎನಿಸುತ್ತಿದೆ. ನಾನೀಗ ಒಬ್ಬಂಟಿ ಎಂದೆನಿಸುತ್ತಿದೆ. ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮೆರಾ ಮುಂದೆ ಕೂತ್ಕೊಂಡು ವಿಡಿಯೋ ಮಾಡುತ್ತಿದ್ದೆ. ಆದರೆ, ಇವತ್ತು ಕಾರಲ್ಲಿ ಕುಳಿತು ವಿಡಿಯೋ ಮಾಡುತ್ತಿದ್ದೇನೆ’ ಎಂದು ಸಮೀರ್ ಹೇಳಿದ್ದಾನೆ.

ನಾನು ಮೋಸ ಹೋದೆ

ನಮ್ಮವರೇ ನನಗೆ ಕೈಕೊಟ್ಟರು. ಅವರನ್ನು ನಂಬಿ ನಾನೀಗ ಮೋಸ ಹೋದೆ ಎನಿಸುತ್ತಿದೆ. ನಾನೀಗ ಒಬ್ಬಂಟಿ ಎಂದೆನಿಸುತ್ತಿದೆ. ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮೆರಾ ಮುಂದೆ ಕೂತ್ಕೊಂಡು ವಿಡಿಯೋ ಮಾಡುತ್ತಿದ್ದೆ. ಆದರೆ, ಇವತ್ತು ಕಾರಲ್ಲಿ ಕುಳಿತು ವಿಡಿಯೋ ಮಾಡುತ್ತಿದ್ದೇನೆ.

ಸಮೀರ್‌ ಎಂ.ಡಿ., ಯೂಟ್ಯೂಬರ್‌

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಕಂಬಳ ತುಳು ಸಂಸ್ಕೃತಿಯ ಪ್ರತೀಕ: ಡಾ.ಜಿ.ಭೀಮೇಶ್ವರ ಜೋಷಿ
ಪಾಲಿಕೆ ಬಜೆಟ್‌ ಪೂರ್ವಭಾವಿ ಸಭೆಗೆ ಬೆರಳೆಣಿಕೆ ಹಾಜರು: ಡಿಸಿ ನಿರಾಸೆ