ಆಧ್ಯಾತ್ಮಿಕ ಅನುಭೂತಿಯ ಮುದ್ರಾಧಾರಣೆ

Published : Aug 27, 2026, 12:34 PM IST
Gokarna

ಸಾರಾಂಶ

ಆಧ್ಯಾತ್ಮಿಕ ಅನುಭೂತಿಯ ಮುದ್ರಾಧಾರಣೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಮುದ್ರಾಧಾರಣೆ ಸಾಮಾನ್ಯವಾಗಿ ನನಗೆ ಪ್ರವಾಸವೆಂದರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡುವುದೆಂದರೆ ಮನಸ್ಸಿಗೆ ಎಲ್ಲಿಲ್ಲದ ಆನಂದ.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಮುದ್ರಾಧಾರಣೆ ಸಾಮಾನ್ಯವಾಗಿ ನನಗೆ ಪ್ರವಾಸವೆಂದರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡುವುದೆಂದರೆ ಮನಸ್ಸಿಗೆ ಎಲ್ಲಿಲ್ಲದ ಆನಂದ. ಅಂತಹ ಒಂದು ಆಧ್ಯಾತ್ಮಿಕ ಅನುಭವವನ್ನು ಪಡೆಯುವ ಸೌಭಾಗ್ಯ 23/08/2026 ರಂದು ನಮಗೆ ದೊರೆಯಿತು.

ಶ್ರಾವಣ ಶುಕ್ಲ ಏಕಾದಶಿ — ಪುತ್ರದಾ ಏಕಾದಶಿಯ ಇಂತಹ ಪವಿತ್ರ ಸಂದರ್ಭದಲ್ಲಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಅಂದರೆ ಗೋಕರ್ಣ ಮಠದತ್ತ ನಾವು ಪ್ರಯಾಣ ಬೆಳೆಸಿದೆವು.

ಮಠದತ್ತ ಸಾಗುವ ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯ

ಮಠದತ್ತ ಸಾಗುವ ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯ ಮನಸೂರೆಗೊಂಡಿತು. ಸುತ್ತಲೂ ಹಸಿರಿನ ಹೊದಿಕೆ, ಅದರ ನಡುವೆ ಪ್ರಶಾಂತವಾಗಿ ಹರಿಯುವ ಕುಶಾವತಿ ನದಿ… ಪ್ರಕೃತಿ ತಾಯಿಯ ಮಡಿಲಲ್ಲಿ ಕುಳಿತುಕೊಂಡು ಆಕೆಯ ಮಮತೆಯನ್ನು ಅನುಭವಿಸಿದಂತೆಯೇ ಭಾಸವಾಯಿತು.

ಮಠದತ್ತ ಸಾಗುವಾಗಲೇ ದೂರದಿಂದ ಕಾಣಿಸಿದ 77 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ನಮ್ಮ ಗಮನ ಸೆಳೆಯಿತು. ಆ ಮೂರ್ತಿಯಲ್ಲಿನ ಗಾಂಭೀರ್ಯ, ಆ ಮಂದಹಾಸ… ಆಹಾ! ಆ ದಿವ್ಯ ದರ್ಶನವನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು, ಸೌಭಾಗ್ಯಶಾಲಿಗಳು ಎಂದೆನಿಸಿತು.

ಮಠದ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ಗೋವಾ ಪ್ರಾಂತ್ಯದ ವೈಶಿಷ್ಟ್ಯವನ್ನು ಬಿಂಬಿಸುವ ವಿನ್ಯಾಸ

ಮಠದ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ಗೋವಾ ಪ್ರಾಂತ್ಯದ ವೈಶಿಷ್ಟ್ಯವನ್ನು ಬಿಂಬಿಸುವ ವಿನ್ಯಾಸ ಮನಮೋಹಕವಾಗಿತ್ತು. ವಿಶೇಷವಾಗಿ ಕಾವಿ ಕಲಾಕೃತಿಗಳಿಂದ ವರ್ಣರಂಜಿತಗೊಂಡಿರುವ ಮಠದ ಸೌಂದರ್ಯವು ನಿಜಕ್ಕೂ ನಮ್ಮ ನಯನಗಳಿಗೆ ಹಬ್ಬದೂಟವೆನಿಸಿತು.

ಇವೆಲ್ಲವೂ ಮಠದ ಬಾಹ್ಯ ಸೌಂದರ್ಯದ ಅನುಭವವಾದರೆ, ನಮ್ಮ ಮನದಾಳದ ಉದ್ದೇಶ ಮಾತ್ರ ಇನ್ನೂ ಪವಿತ್ರವಾಗಿತ್ತು — ಚಾತುರ್ಮಾಸದ ಈ ಸುಸಂದರ್ಭದಲ್ಲಿ ನಮ್ಮ ಗುರುಗಳ ದರ್ಶನ ಪಡೆದು, ಅವರ ಆಶೀರ್ವಾದವನ್ನು ಪಡೆಯಬೇಕು ಎಂಬುದು.

ಮಠದ ದೇವರಾದ ಶ್ರೀರಾಮ ಹಾಗೂ ಶ್ರೀ ವೀರ ವಿಠ್ಠಲನ ದರ್ಶನ ಅತ್ಯಂತ ಸುಂದರವಾಗಿ ನೆರವೇರಿತು. ಅದರ ನಂತರ ಮಠದ 24ನೇ ಗುರುಗಳಾದ ಶ್ರೀ ಶ್ರೀ ವಿದ್ಯಾದೀಶತೀರ್ಥರ ದರ್ಶನ ಪಡೆದು, ಅವರಿಂದ ಮುದ್ರಾಧಾರಣೆ ಪಡೆಯುವ ಪವಿತ್ರ ಸಂದರ್ಭ ನಮಗೆ ದೊರೆಯಿತು. ಆ ಕ್ಷಣವನ್ನು ಪದಗಳಲ್ಲಿ ವರ್ಣಿಸುವುದು ನಿಜಕ್ಕೂ ಕಷ್ಟ.

ಗುರುಗಳನ್ನು ಏನೆಂದು ವರ್ಣಿಸಲಿ ನಾನು?.

ನಿಮ್ಮ ಮಂದಹಾಸವೊಂದೇ ಸಾಕು, ಈ ಜೀವವು ಹೊತ್ತು ತಂದಿರುವ ಅದೆಷ್ಟೋ ಮನದ ದುಗುಡಗಳನ್ನು ಮರೆಸಲು…!

ನಿಮ್ಮ ಸಾನ್ನಿಧ್ಯದಲ್ಲಿರುವ ಕೆಲವೇ ಕ್ಷಣಗಳು ಮನಸ್ಸಿಗೆ ನೀಡುವ ನೆಮ್ಮದಿ, ಧೈರ್ಯ ಮತ್ತು ಸಂತೃಪ್ತಿ ಅನನ್ಯ. ಇಷ್ಟೇ ಅಲ್ಲ… ಮಠದ ಈ ಪವಿತ್ರ ವಾತಾವರಣದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬ ಪುರೋಹಿತರು, ಸಿಬ್ಬಂದಿ ಹಾಗೂ ಕಾರ್ಯಕರ್ತರು ನಮಗೆ ನೀಡಿದ ಮಾರ್ಗದರ್ಶನ, ಆತ್ಮೀಯ ಉಪಚಾರ ಮತ್ತು ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ. ಅಲ್ಲಿನ ಶಿಸ್ತುಬದ್ಧ ಸಿಬ್ಬಂದಿವರ್ಗವು ಆಗಮಿಸಿದ ಪ್ರತಿಯೊಬ್ಬ ಭಕ್ತನಿಗೂ ಯಾವುದೇ ಕೊರತೆಯಾಗದಂತೆ, ಪ್ರತಿಯೊಂದು ಸೌಕರ್ಯವೂ ದೊರೆಯುವಂತೆ ನೋಡಿಕೊಳ್ಳುತ್ತಿದ್ದ ರೀತಿ ನಿಜಕ್ಕೂ ಪ್ರಶಂಸನೀಯ. ಪ್ರತಿಯೊಬ್ಬ ಭಕ್ತನ ಸೇವೆಯಲ್ಲೂ ಕಾಣಿಸಿಕೊಂಡ ಆ ಶ್ರದ್ಧೆ, ವಿನಯ ಮತ್ತು ಆತ್ಮೀಯತೆ ಮನಸ್ಸನ್ನು ಮುಟ್ಟಿತು.

ಇಂತಹ ಸೇವಾ ಮನೋಭಾವವೂ, ಶಿಸ್ತುಬದ್ಧ ಕಾರ್ಯವೈಖರಿಯೂ ಸಾಧ್ಯವಾಗಿರುವುದು ಗುರುಗಳ ಮಾರ್ಗದರ್ಶನ ಮತ್ತು ಸಂಸ್ಕಾರದ ಫಲವೇ ಎಂದರೆ ತಪ್ಪಾಗಲಾರದು. ನಾನು ಸಾಮಾನ್ಯವಾಗಿ ಯಾವಾಗಲೂ ಹೇಳುವ ಒಂದು ಮಾತನ್ನು ಇಂದು ಇನ್ನಷ್ಟು ಹೆಮ್ಮೆಯಿಂದ ಹೇಳುತ್ತೇನೆ… ನಿಮ್ಮಂತಹ ಗುರುಗಳನ್ನು ಪಡೆದ ನಮ್ಮ ಪೀಳಿಗೆಯೇ ಧನ್ಯ…!

ಗುರುಗಳ ಪಾದಕಮಲಗಳಿಗೆ ಅನಂತ ಕೋಟಿ ಪ್ರಣಾಮಗಳು.

ಶ್ರೀಗುರುಭ್ಯೋ ನಮಃ

। ಸೌಮ್ಯ ಜೆ. ಪಿ. ಭಟ್, ಮೂಲ್ಕಿ

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಭಾಷೆಯ ಬಳಕೆಯೂ ಒಂದು ಕಲೆ: ಡಾ. ಆರ್. ನರಸಿಂಹಮೂರ್ತಿ
ಪಡುಮಾರ್ನಾಡು ಗ್ರಾಮದ ಗುಂಡುಕಲ್ಲಿನಲ್ಲಿ ಈದ್ ಮಿಲಾದ್ ರ‍್ಯಾಲಿ