ಕಾಂಗ್ರೆಸ್‌ನಿಂದ ದಲಿತ ಸಮುದಾಯಕ್ಕೆ ನ್ಯಾಯ ಸಿಗದು

KannadaprabhaNewsNetwork |  
Published : Dec 19, 2023, 01:45 AM ISTUpdated : Dec 19, 2023, 01:46 AM IST
ಮಾದಿಗರ ಆತ್ಮಗೌರವ ಸಮಾವೇಶಕ್ಕೆ ಮಾಜಿ ಶಾಸಕ ಬಸವರಾಜ ದಢೇಸೂಗುರು ಚಾಲನೆ ನೀಡಿದರು. ಪಕ್ಷದ ರಾಜ್ಯ ಮುಖಂಡ ಎಚ್. ಹನುಮಂತಪ್ಪ ಇತರರಿದ್ದರು. | Kannada Prabha

ಸಾರಾಂಶ

ಒಳಮೀಸಲಾತಿಯನ್ನು ನೀಡಬೇಕು. ಶೋಷಿತ ಸಮುದಾಯಗಳ ಹಿತ ಕಾಯಬೇಕು ಎಂಬ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆತ್ಮಗೌರವ ಸಮಾವೇಶವನ್ನು ಆಯೋಜಿಸಲಾಗಿದೆ.

ಬಳ್ಳಾರಿ: ಕಾಂಗ್ರೆಸ್‌ನಿಂದ ದಲಿತ ಸಮುದಾಯಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ವಂಚನೆ ಮಾಡಿದೆ ಎಂದು ಕನಕಗಿರಿಯ ಮಾಜಿ ಶಾಸಕ ಬಸವರಾಜ ದಢೇಸೂಗೂರು ಆಪಾದಿಸಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಮಾದಿಗರ ಆತ್ಮಗೌರವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಕಾಂಗ್ರೆಸ್ ಈ ಹಿಂದೆ ಒಳ ಮೀಸಲಾತಿಯ ಭರವಸೆ ನೀಡಿತ್ತು. ಆದರೆ, ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಂತೆ ತಳ ಸಮುದಾಯವನ್ನು ಮೆರೆಯಿತು ಎಂದು ದೂರಿದರು.

ದಲಿತರು ಸಂಘಟಿತರಾಗಬೇಕು. ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟು ಕಾಯ್ದುಕೊಂಡರೆ ಎಲ್ಲ ಪಕ್ಷಗಳು ನಿಮ್ಮ ಹತ್ತಿರ ಸುಳಿಯುತ್ತವೆ. ಯಾವ ಪಕ್ಷ ದಲಿತರಿಗೆ ಒಳಿತು ಮಾಡುತ್ತದೆ. ಯಾವ ಪಕ್ಷ ಅನ್ಯಾಯ ಮಾಡುತ್ತಲೇ ಬಂದಿದೆ ಎಂಬ ರಾಜಕೀಯ ಪ್ರಜ್ಞೆಯನ್ನು ದಲಿತರು ಬೆಳೆಸಿಕೊಳ್ಳಬೇಕು. ಮುಂದಿನ ತಲೆಮಾರಿನ ಭವಿಷ್ಯಕ್ಕಾದರೂ ಒಳಮೀಸಲಾತಿಗಾಗಿ ಹೋರಾಟ ಮುಂದುವರಿಸಿ, ಯಶಸ್ಸು ಕಾಣಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ರಾಜ್ಯ ಮುಖಂಡ ಎಚ್. ಹನುಮಂತಪ್ಪ ಮಾತನಾಡಿ, ಒಳಮೀಸಲಾತಿಯನ್ನು ನೀಡಬೇಕು. ಶೋಷಿತ ಸಮುದಾಯಗಳ ಹಿತ ಕಾಯಬೇಕು ಎಂಬ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆತ್ಮಗೌರವ ಸಮಾವೇಶವನ್ನು ಆಯೋಜಿಸಲಾಗಿದೆ. ಮಾದಿಗರ ಸಮುದಾಯ ಜಾಗೃತರಾಗಬೇಕು. ಒಳಮೀಸಲಾತಿಯ ಭರವಸೆ ನೀಡಿದ ಕಾಂಗ್ರೆಸ್ ಸರ್ಕಾರ ಇಂದು ಯಾವುದೇ ನಿರ್ಧಾರ ಕೈಗೊಳ್ಳದೆ ಮೌನ ವಹಿಸಿರುವುದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೆ, ಬಿಜೆಪಿ ಅವಧಿಯಲ್ಲಿ ಒಳಮೀಸಲಾತಿ ಸಂಬಂಧ ಶಿಫಾರಸು ಮಾಡಿದ್ದರೂ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾವು ಇಷ್ಟಕ್ಕೆ ಬಿಡುವುದಿಲ್ಲ. ಹೋರಾಟವನ್ನು ತೀವ್ರಗೊಳಿಸುತ್ತೇವೆ. ಬೇಡಿಕೆ ಈಡೇರುವವರೆಗೆ ಚಳವಳಿಯನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಮುಖಂಡರಾದ ವಿಜಯಕುಮಾರ್ ಅಡಿಕೆ, ಭೀಮಣ್ಣ ಬಿಲ್ಲವ, ರವೀಂದ್ರ ಜಲ್ದಾರ್, ಎಂ. ವಿರುಪಾಕ್ಷಿ, ಗಣೇಶ್, ಜಗದೀಶ್, ಈರಣ್ಣ ಮೌರ್ಯ, ಎಚ್. ಪೂಜಪ್ಪ, ಮೇಕಾರ್ ವೀರೇಶ್ ಮತ್ತಿತರರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಮಲ್ಲೇಶ್ ಹಾಗೂ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ