ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಕಾಲೋನಿ ದಲಿತರ ಸ್ಮಶಾನದ ಸಮಾಧಿ ಕಲ್ಲುಗಳನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಾಲೋನಿ ನಿವಾಸಿಗಳು ಬುಧವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಗೆಜ್ಜಲಗೆರೆ ಗ್ರಾಮದಿಂದ ಪಾದಯಾತ್ರೆಯಲ್ಲಿ ಆಗಮಿಸಿದ್ದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಕಾಲೋನಿಯ ಸರ್ವೇ ನಂಬರ್ 203ರಲ್ಲಿ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರು ಕಳೆದ 60, 70 ವರ್ಷಗಳಿಂದ ಶವ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾಲೋನಿ ನಿವಾಸಿ ಪುಟ್ಟತಾಯಮ್ಮ ಈ ಮೇಲ್ಕಂಡ ಜಮೀನಿನ ಪೈಕಿ 1.20 ಗುಂಟೆ ತಮಗೆ ಮಂಜೂರಾಗಿದೆ ಎಂದು ಸುಳ್ಳುದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎಂದು ದೂರಿದರು.ಈ ಬಗ್ಗೆ ಪ್ರಶ್ನಿಸಿದ ದಲಿತರ ಮೇಲೆ ದ್ವೇಷ ಸಾಧಿಸಿ ಜುಲೈ 22ರಂದು ರಾತ್ರಿ ಸ್ಮಶಾನದಲ್ಲಿ ಇದ್ದ ಸಮಾಧಿಗಳ ಮೇಲೆ ಹಾಕಲಾಗಿದ್ದ ಭಾವಚಿತ್ರದ ಕಲ್ಲುಗಳನ್ನು ಕಿತ್ತು ದ್ವಂಸ ಮಾಡಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿ. ಎನ್ ಮಂಜುನಾಥ್ ಆರೋಪಿಸಿದರು.
ತಾಲೂಕು ಆಡಳಿತ ಕೃತ್ಯವಸಗಿರುವ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಒತ್ತಾಯಿಸಿ ಗ್ರಾಮದ ಸ್ಮಶಾನ ಜಾಗದಲ್ಲಿ ಪ್ರತಿಭಟನೆ ನಡೆಸಿದ ನಂತರ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ತೆರಳಿ ಎದುರು ಧರಣಿ ನಡೆಸಿದರು.ನಂತರ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಅವರಿಗೆ ಪ್ರತಿಭಟನೆಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಲಿಂಗಪ್ಪಾಜಿ, ಮಂಜುನಾಥ, ಶಿವಲಿಂಗಯ್ಯ, ಶಿವರಾಜು, ನಾಗರಾಜು, ಮೀನಾಕ್ಷಿ, ಪುಟ್ಟಮ್ಮ, ಆತಗೂರು ಲಿಂಗಯ್ಯ, ರಮಾನಂದ ಮತ್ತಿತರರು ಭಾಗವಹಿಸಿದ್ದರು.