ಹಾವೇರಿ: ಸಮಾಜದಲ್ಲಿ ದಲಿತರು ಸೇರಿದಂತೆ ಅನೇಕ ಸಮುದಾಯಗಳ ಜನರು ಶೋಷಣೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಲು ಸಹ ಪರದಾಡುವಂತ ಸ್ಥಿತಿ ಇದೆ. ಶೋಷಿತರಾಗಿರುವ ಕಟ್ಟಕಡೆಯ ಸಮಾಜಕ್ಕೆ ದಲಿತ ಚಳವಳಿಯ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಸಾಹಿತಿಗಳಾದ ಸಿದ್ದಲಿಂಗಯ್ಯ, ಚಂಪಾ, ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕರು ಕಥೆ, ಕವನ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಾ ದಲಿತ ಚಳವಳಿಗೆ ಶಕ್ತಿಯಾಗಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯು ದಲಿತ ಚಳವಳಿಗೆ ಕೈಜೋಡಿಸುವ ಮೂಲಕ ಹೊಸಶಕ್ತಿ ನೀಡಿತ್ತು. ಶೋಷಿತರ ಉನ್ನತಿಗೆ ದಲಿತ ಚಳವಳಿ ಅತಿ ಅವಶವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ, ದಲಿತ ಚಳವಳಿಯಲ್ಲಿ ಮೊದಲಿನಂತೆ ಕಾವಿಲ್ಲ. ಒಗ್ಗಟ್ಟಿಲ್ಲ ಎನ್ನುವುದು ನಿಜ. ಆದರೆ ದಲಿತರಿಗೆ ಸಂಬಂಧಿಸಿದ ಸಮಸ್ಯೆ ಎದುರಾದಾಗ ಎಲ್ಲ ಸಂಘಟನೆಗಳು ಒಟ್ಟಾಗಿ ನಿಲ್ಲುವುದೇ ಒಂದು ಆಶಾದಾಯಕ ಬೆಳವಣಿಗೆ. ಯಾವುದೇ ಸಂಘಟನೆ ಇರಲಿ, ಆ ಸಂಘಟನೆಗೆ ಸಾಂಸ್ಕೃತಿಕ ನೆಲಗಟ್ಟು ಇದ್ದಾಗ ಬಹುಕಾಲ ಉಳಿಯಲು ಸಾಧ್ಯ. ಹಾವೇರಿ ಜಿಲ್ಲೆಯ ದಸಂಸ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಚಳವಳಿ ಮರುಜೀವ ನೀಡಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ ಗಾಂಧಿ ಸಂಜೀವಣ್ಣನವರ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪ ಅವರ ಆಶಯದಂತೆ, ಸಮಿತಿಯ ರಾಜ್ಯ ಮುಖಂಡರ ಮಾರ್ಗದರ್ಶನಲ್ಲಿ ಮುನ್ನಡೆಸಲಾಗುತ್ತಿದೆ. ನೊಂದ ದಲಿತ ಶೋಷಿತರ ಪರವಾಗಿ ಸದಾ ನಿಂತಿದೆ. ಇದೀಗ ಜನಸಂಪರ್ಕ ಕಾರ್ಯಾಲಯ ಆರಂಭಿಸಲಾಗಿದೆ. ಇದರ ಪ್ರಯೋಜನ ನೊಂದವರು ಪಡೆದುಕೊಳ್ಳಬೇಕು ಎಂದರು.