ಹೊಸಪೇಟೆಯಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಾವೇಶ ಫೆ. 4ರಿಂದ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಜಾತಿ ವ್ಯವಸ್ಥೆಯನ್ನು ಬದಲಿಸುವ ಆಶಯಕ್ಕೆ ಧಕ್ಕೆ ಬಂದಿದೆ. ದೌರ್ಜನ್ಯದ ವಿರುದ್ಧ ಹಕ್ಕೊತ್ತಾಯ ಸಲ್ಲಿಸಲಾಗುವುದು.

ಹೊಸಪೇಟೆ: ದಲಿತ ಹಕ್ಕುಗಳ ಸಮಿತಿಯ ೩ನೇ ರಾಜ್ಯ ಸಮಾವೇಶವನ್ನು ಮುಂದಿನ ವರ್ಷ ಫೆಬ್ರವರಿ 4, 5ರಂದು ಎರಡು ದಿನಗಳ ಕಾಲ ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಹಕ್ಕುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ೨೦೧೫ ಮತ್ತು ೨೦೧೯ರಲ್ಲಿ ಎರಡು ಸಮಾವೇಶಗಳನ್ನು ನಡೆಸಲಾಗಿದೆ. ಮೂರನೇ ಸಮಾವೇಶ ಹೊಸಪೇಟೆಯಲ್ಲಿ ನಡೆಯಲಿದ್ದು, ಜಾತಿ ನಿರ್ಮೂಲನೆ ನಮ್ಮ ಸಂಘಟನೆಯ ಗುರಿಯಾಗಿದೆ. ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವ, ಒಕ್ಕೂಟ ತತ್ವ ನಮ್ಮ ಸಂಘಟನೆಯ ಗುರಿಯಾಗಿದೆ. ಅಂಬೇಡ್ಕರ್ ಅವರ ಕನಸು ನನಸಾಗಿಸುವ ಸಂಕಲ್ಪ ನಮ್ಮದಾಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ‍್ಯ ಬಂದು ೭ ದಶಕ ಕಂಡರೂ ಗುರುತಿಸುವ ಮಟ್ಟಿಗೆ ದಲಿತರು ಅಭಿವೃದ್ಧಿ ಕಂಡಿಲ್ಲ. ಅವರ ಜೀವನ ಮಟ್ಟವೂ ಸುಧಾರಿಸಿಲ್ಲ. ಸಮಾಜಕ್ಕೆ ಅಂಟಿರುವ ಕಳಂಕ ನಿರ್ನಾಮ ಮಾಡದೇ ಸಮಾನತೆ ತರಲು ಸಾಧ್ಯವಿಲ್ಲ. ಬಾಬಾ ಸಾಹೇಬರ ಕನಸು ಈಡೇರಿಸಲು ಅವರ ತತ್ವ- ಸಿದ್ಧಾಂತಗಳನ್ನು ದೃಢವಾಗಿ ನಂಬಿ ಕೆಲಸ ಮಾಡಬೇಕು ಎಂದರು.

ದಲಿತ ಸಮುದಾಯದ ಶೇ. ೫೬ರಷ್ಟು ಜನ ಸಫಾಯಿ ಕರ್ಮಾಚಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಶೇ. ೭೩.೫ರಷ್ಟು ಅನಕ್ಷರಸ್ಥರಿದ್ದಾರೆ. ದಲಿತರಿಗೆ ಸಂಪೂರ್ಣ ಶಿಕ್ಷಣ ಕೊಡಲು ಆಗಿಲ್ಲ. ಕೇರಳದಲ್ಲಿ ಸಂಪೂರ್ಣ ಶಿಕ್ಷಣ ನೀಡಲು ಸಾಧ್ಯವಾದರೂ ನಮ್ಮಲ್ಲಿನ ಈ ಪರಿಸ್ಥಿತಿ ಆತಂಕಕಾರಿಯಾಗಿದೆ. ಮೀಸಲಾತಿ ಸೌಲಭ್ಯ ಇಂದಿಗೂ ಸರಿಯಾಗಿ ಸಿಗುತ್ತಿಲ್ಲ. ಉನ್ನತ ಶಿಕ್ಷಣ, ಉನ್ನತ ಹುದ್ದೆಗಳಲ್ಲಿ ಸಿಗುತ್ತಿಲ್ಲ. ತಾರತಮ್ಯ ಹೆಚ್ಚಾಗಿದೆ. ಮೀಸಲಾತಿಯಿಂದ ದೇಶಕ್ಕೆ ನಷ್ಟ ಎಂಬ ಭಾವನೆ ಸೃಷ್ಟಿಸುವ ಪ್ರಯತ್ನ ನಡೆದಿದೆ. ಸಂವಿಧಾನದ ಆಶಯಗಳು ಈಡೇರಿಕೆ ಆಗಿಲ್ಲ. ಅಸಮಾನತೆ ವಿರುದ್ಧ ಧ್ವನಿ ಎತ್ತುವ ಕೆಲಸ ಸಂಘಟನೆ ಮಾಡುತ್ತಿದೆ ಎಂದರು.

ಯಾವ ಜಾತಿಯವರು ಎಷ್ಟು ಅಭಿವೃದ್ಧಿ ಆಗಿದ್ದಾರೆ ಎಂಬ ಅಂಕಿ-ಅಂಶ ಸಹಿತ ಮಾಹಿತಿ ಜನರಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಆದರೆ, ಈ ಸತ್ಯ ತಿಳಿಯಲೇಬಾರದು ಎಂಬ ಹುನ್ನಾರ ನಡೆಯುತ್ತಿದೆ. ಅದರ ವಸ್ತುಸ್ಥಿತಿ ಗೊತ್ತಾಗಲಿ. ಜನರಿಗೆ ಸತ್ಯ ಗೊತ್ತಾಗಬೇಕು. ಈ ಬಗ್ಗೆ ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಾಡಲಾಗುವುದು. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ದಲಿತರಲ್ಲಿ ಶೇ. ೪೦ರಷ್ಟು ಜನ ೨ ಎಕರೆ ಭೂಮಿ ಮಾತ್ರ ಹೊಂದಿದ್ದಾರೆ. ಶೇ. 70ರಷ್ಟು ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ಮೂಲಭೂತ ಹಕ್ಕುಗಳನ್ನು ಜಾರಿ ಮಾಡಲು ಒತ್ತಾಯ ಮಾಡಲಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಜಾತಿ ವ್ಯವಸ್ಥೆಯನ್ನು ಬದಲಿಸುವ ಆಶಯಕ್ಕೆ ಧಕ್ಕೆ ಬಂದಿದೆ. ದೌರ್ಜನ್ಯದ ವಿರುದ್ಧ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.

ಮುಖಂಡರಾದ ಮರಡಿ ಜಂಬಯ್ಯ ನಾಯಕ, ಬಿಸಾಟಿ ತಾಯಪ್ಪ ನಾಯಕ, ರಮೇಶ ಕುಮಾರ, ಬಿ. ಸ್ವಾಮಿ, ಯಲ್ಲಾಲಿಂಗ ಮತ್ತಿತರರಿದ್ದರು.

Share this article