ಜಾತಿ ಗಣತಿ ವರದಿ, ಒಳಮೀಸಲಾತಿ ಜಾರಿಗೆ ಆಗ್ರಹ

KannadaprabhaNewsNetwork | Published : Oct 22, 2024 12:17 AM

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ನೂರೊಂದು ಉಪ ಜಾತಿಗಳಿದ್ದು, ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ಆದೇಶಿಸಿದ್ದರೂ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಜಾತಿ ಜನಗಣತಿ ವರದಿ ಹಾಗೂ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ದೇಶದಲ್ಲಿ ಹತ್ತಾರು ಧರ್ಮ, ನೂರಾರು ಜಾತಿ, ಸಾವಿರಾರು ಉಪ ಜಾತಿಗಳಿದ್ದು ಅವುಗಳ ಸರಿಯಾದ ಸಂಖ್ಯೆ ತಿಳಿದಿಲ್ಲ. ಹೀಗಾಗಿ, ರಾಜಕೀಯ ಪ್ರಾತಿನಿಧ್ಯದಲ್ಲೂ ಕೆಲವು ಜಾತಿಗಳಿಗೆ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರವು ಕಾಂತರಾಜು ಆಯೋಗದ ಜಾತಿ ಜನಗಣತಿ ವರದಿಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.ಪರಿಶಿಷ್ಟ ಜಾತಿಯಲ್ಲಿ ನೂರೊಂದು ಉಪ ಜಾತಿಗಳಿದ್ದು, ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ಆದೇಶಿಸಿದ್ದರೂ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿಲ್ಲ. ಕೂಡಲೇ ಈ ಬಗ್ಗೆ ರಾಜ್ಯ ಸರ್ಕಾರವು ಚಿಂತನೆ ಮಾಡಬೇಕು. ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆ, ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ಒಳ ಮೀಸಲಾತಿ ಜಾರಿಯಾಗುವವರೆಗೆ ತಡೆ ಹಿಡಿಯಬೇಕು ಎಂದು ಅವರು ಆಗ್ರಹಿಸಿದರು.ಈ ಬಗ್ಗೆ ಅನೇಕ ವರ್ಷದಿಂದ ಹೋರಾಟ ನಡೆಯುತ್ತಿದ್ದು, ಆ ವೇಳೆ ತೊಡಕುಗಳನ್ನು ಮುಂದಿಡುತ್ತಿದ್ದರು. ಈಗ ಕಾನೂನು ಮೂಲಕವೇ ಸ್ಪಷ್ಟನೆ ದೊರಕಿದೆ. ಆದರೆ, ಅದರಲ್ಲಿನ ಕೆಲವು ಸಣ್ಣ ಅಂಶವನ್ನು ನೆಪವಾಗಿಟ್ಟು ಮೀಸಲಾತಿ ಜಾರಿಗೊಳಿಸುವುದನ್ನು ತಡೆಯುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿತ್ತು. ಪರಿಶಿಷ್ಟ ಜಾತಿಯೊಳಗಡೆ ಯಾವುದೇ ಸೌಲಭ್ಯ ದೊರೆಯದೆ ಅನ್ಯಾಯಕ್ಕೊಳಗಾಗಿರುವ ಸಮುದಾಯಗಳಿಗೆ ಒಳ ಮೀಸಲಾತಿಯು ಸಾಮಾಜಿಕ ನ್ಯಾಯ ದೊರಕಿಸಿಕೊಡಲಿದೆ. ಕಾನೂನು ತೊಡಕುಗಳೂ ನಿವಾರಣೆಯಾಗಿರುವುದರಿಂದ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮೀಸಲು ಹಣವನ್ನು ವಾಪಸ್ ನಿಗಮಕ್ಕೆ ತುಂಬಿ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕು ಎಂದು ಅವರು ಆಗ್ರಹಿಸಿದರು.ದಸಂಸ ವಿಭಾಗೀಯ ಸಂಘಟನಾ ಸಂಚಾಲಕ ಬನ್ನಳ್ಳಿ ಸೋಮಣ್ಣ, ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಮುಖಂಡರಾದ ದೊಡ್ಡಸಿದ್ದು, ಚಂದ್ರು, ನಾಗರಾಜು, ಬಸವರಾಜು, ಕುಮಾರ್, ಮಹಾದೇವಮ್ಮ, ಅಶೋಕ ಮೊದಲಾದವರು ಇದ್ದರು.

Share this article