ಚನ್ನರಾಯಪಟ್ಟಣದಲ್ಲಿ ದಲಿತರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯ: ಬೇಡಿಕೆ ಈಡೇರಿಸುವ ಭರವಸೆ

KannadaprabhaNewsNetwork |  
Published : Mar 14, 2024, 02:00 AM IST
13ಎಚ್ಎಸ್ಎನ್13 : ತಾಲೂಕು ಆಡಳಿತದ ಪ್ರತಿನಿಧಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು. | Kannada Prabha

ಸಾರಾಂಶ

ದಲಿತಪರ, ರೈತ ಸಂಘ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟದಿಂದ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ಚನ್ನರಾಯಪಟ್ಟಣ ತಾಲೂಕು ಕಚೇರಿ ಎದುರು ಕಳೆದ ಏಳು ದಿನಗಳಿಂದ ನಿರಂತರ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಬುಧವಾರ ಹಿಂಪಡೆಯಲಾಯಿತು. ಬೇಡಿಕೆಗಳನ್ನು ಸ್ಥಳದಲ್ಲೇ ಪರಿಹರಿಸಿದ ಜಿಲ್ಲಾ ಉಪವಿಭಾಗಾಧಿಕಾರಿಗಳು ಉಳಿದ ಬೇಡಿಕೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಬೇಡಿಕೆ ಈಡೇರಿಕೆಯ ಭರವಸೆ ನೀಡಿದ ಉಪವಿಭಾಗಾಧಿಕಾರಿ । ಅಧಿಕಾರಿಗಳ ಜಜತೆ ಚರ್ಚೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದಲಿತಪರ, ರೈತ ಸಂಘ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟದಿಂದ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸಿ ತಾಲೂಕು ಕಛೇರಿ ಎದುರು ಕಳೆದ ಏಳು ದಿನಗಳಿಂದ ನಿರಂತರ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಬುಧವಾರ ಹಿಂಪಡೆಯಲಾಯಿತು.

ದಲಿತ ಮುಖಂಡ ದಂಡೋರ ಮಂಜುನಾಥ್ ಮಾತನಾಡಿ, ತಾಲೂಕಿನ ೪೧ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೋಸ್ಟರ್ ಪದ್ಧತಿ ಅಳವಡಿಸಿರುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ೫ ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳನ್ನು ಕೂಡಲೇ ಬೇರೆ ಜಿಲ್ಲೆಗೆ ವರ್ಗಾಯಿಸಿ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಪಟ್ಟಣದ ಎ.ಡಿ.ಕಾಲೋನಿ, ನಾಗಸಮುದ್ರ ರಸ್ತೆ ಹಾಗೂ ಅಗ್ರಹಾರ, ಅರಳಿಕಟ್ಟೆ ಕೆರೆ ಪಕ್ಕದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸರ್ಕಾರ ಮನೆ ಮಂಜೂರು ಮಾಡಿದ್ದು ಮನೆಗಳು ಅರ್ಧ ಕೆಲಸಕ್ಕೆ ನಿಂತಿದೆ. ಪೂರ್ಣ ಕೆಲಸ ಆಗದೇ ಇದ್ದರೂ ಸಹ ಅಧಿಕಾರಿಗಳು ಸುಳ್ಳು ಮಾಹಿತಿಗಳನ್ನು ನೀಡಿ ಇದರ ಪೂರ್ತಿ ಹಣವನ್ನು ಶಾಸಕರ ಬೆಂಬಲಿಗರಾದ ಗುತ್ತಿಗೆದಾರರಿಗೆ ಅಕ್ರಮವಾಗಿ ಬಿಲ್ ನೀಡಿದ್ದಾರೆ ಎಂದು ದೂರಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ.ರವಿ ಮಾತನಾಡಿ, ಪಟ್ಟಣದ ಬಾಗೂರು ರಸ್ತೆ, ೧೩ನೇ ವಾರ್ಡ್ ವ್ಯಾಪ್ತಿಗೆ ಬರುವ ಜನತಾ ಕಾಲೋನಿಗೆ ಹೋಗುವ ಪುರಸಭೆ ರಸ್ತೆಯ ಮಧ್ಯಭಾಗಕ್ಕೆ ಸ್ಥಳೀಯ ಜೆಡಿಎಸ್ ಪುರಸಭಾ ಸದಸ್ಯರ ಕುಮ್ಮಕ್ಕಿನಿಂದ ರಸ್ತೆ ಮಧ್ಯಭಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟು ತೆರವುಗೊಳಿಸದೇ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ತಾಲೂಕಿನ ದೇಶಕ್ಕೆ ಅನ್ನ ಕೊಡುವ ರೈತಾಪಿ ವರ್ಗವು ತುಂಬಾ ಕಷ್ಟದಲ್ಲಿದ್ದು ಅವರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ರೈತರು ಕಂಗಾಲಾಗಿದ್ದು ತೆಂಗು ಬೆಳೆದ ರೈತರ ಪರಿಸ್ಥಿತಿ, ಶೋಚನೀಯವಾಗಿದೆ. ಅರಣ್ಯ ಇಲಾಖೆಯವರು ಅತಿಕ್ರಮಣ ಮಾಡಿ ಒತ್ತುವರಿ ಮಾಡಿ ಸುಮಾರು ೧೦೦ ತೆಂಗಿನ ಸಸಿಗಳನ್ನು ಕಿತ್ತು ಹಾಕಿ ದೌರ್ಜನ್ಯ ಎಸಗಿರುತ್ತಾರೆ. ಆದ್ದರಿಂದ ಕೂಡಲೇ ಅರಣ್ಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಜಂಟಿ ಸರ್ವೆ ಮಾಡಿಸಿ ದಲಿತ ಕೋಮಿಗೆ ಸೇರಿದ ಮಹಾಲಕ್ಷ್ಮೀಯವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ಅಧಿಕಾರಿಗಳ ಜತೆ ಸುಮಾರು ೬ ಗಂಟೆಗಳ ಕಾಲ ಮಾತುಕತೆ ನಡೆಸಿ ಕೆಲವು ಭೇಡಿಕೆಗಳನ್ನು ಸ್ಥಳದಲ್ಲೇ ಪರಿಹರಿಸಿದ ಜಿಲ್ಲಾ ಉಪವಿಭಾಗಾಧಿಕಾರಿಗಳು ಉಳಿದ ಬೇಡಿಕೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ದಲಿತ ಮುಖಂಡರಾದ ಕುರುವಂಕ ಮಂಜುನಾಥ್, ರಾಘು, ಪುಟ್ಟೇಗೌಡ, ಪ್ರೇಮಮ್ಮ, ಶ್ರೀನಿವಾಸ್, ಶಿವಕುಮಾರ್ ಮತ್ತಿತರಿದ್ದರು.ಚನ್ನರಾಯಪಟ್ಟಣ ತಾಲೂಕು ಆಡಳಿತದ ಪ್ರತಿನಿಧಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ