ಕನ್ನಡಪ್ರಭ ವಾರ್ತೆ ಮಂಗಳೂರು
ಕುಳಾಯಿಯಲ್ಲಿ 196.51 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಬಂದರಿನ ಭಾಗವಾಗಿ ಬ್ರೇಕ್‌ವಾಟರ್ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದಾಗಲೇ ಸಮುದ್ರದ ಪ್ರಕ್ಷುಬ್ಧತೆಯಿಂದ ಇತ್ತೀಚೆಗೆ ಹಾನಿಗೀಡಾಗಿದೆ. ಹಾನಿಯಾದ ಭಾಗದ ಕಾಮಗಾರಿಯನ್ನು ಗುತ್ತಿಗೆದಾರರಿಂದಲೇ ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದು ಕುಳಾಯಿ ಜೆಟ್ಟಿ ಯೋಜನೆಯ ಅನುಷ್ಠಾನ ಏಜೆನ್ಸಿಯಾದ ನವ ಮಂಗಳೂರು ಬಂದರು ಪ್ರಾಧಿಕಾರದ ಆಡಳಿತ ವಿಭಾಗದ ಹಿರಿಯ ಉಪ ಕಾರ್ಯದರ್ಶಿ ಕೃಷ್ಣ ಬಾಪಿರಾಜ್ ಜಿ.ಆರ್. ತಿಳಿಸಿದ್ದಾರೆ.ಎನ್‌ಎಂಪಿಎ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಳಾಯಿ ಜೆಟ್ಟಿ ಕಾಮಗಾರಿಯ ಭಾಗವಾಗಿ ಎರಡು ಬ್ರೇಕ್ ವಾಟರ್‌ಗಳನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ದಕ್ಷಿಣ ಭಾಗದ 300 ಮೀ. ಉದ್ದದ ಬ್ರೇಕ್ ವಾಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉತ್ತರ ಭಾಗದ ಬ್ರೇಕ್ ವಾಟರ್ 300 ಮೀ.ವರೆಗೆ ಭಾಗಶಃ ಪೂರ್ಣಗೊಳಿಸಲಾಗಿದೆ. 300 ಮೀ.ನಿಂದ 510 ಮೀ.ವರೆಗೆ ಫಿಲ್ಟರ್ ಪದರ ಮತ್ತು ಕೋರ್ ಮೆಟಿರಿಯಲ್ ಇರಿಸಲಾಗಿತ್ತು. ಕಾಮಗಾರಿ ಪೂರ್ಣವಾಗಿರಲಿಲ್ಲ. ಇಷ್ಟರಲ್ಲಿ ಮಳೆಗಾಲ ಶುರುವಾಗಿ ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗಿದ್ದರಿಂದ ಉತ್ತರ ಬ್ರೇಕ್ ವಾಟರ್ 300 ಮೀ.ನಿಂದ 510 ಮೀ.ವರೆಗೆ ಹಾನಿಗೆ ಒಳಗಾಗಿದೆ. ಈ ಹಾನಿಯ ಭಾಗವನ್ನು ಗುತ್ತಿಗೆದಾರರೇ ಸರಿಪಡಿಸಲಿದ್ದಾರೆ. ಅದಕ್ಕೆ ಸ್ಪಷ್ಟ ಸೂಚನೆ ನೀಡಿದ್ದು ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಗುತ್ತಿಗೆದಾರರಿಗೆ ಬ್ರೇಕ್ ವಾಟರ್ ಕಾಮಗಾರಿಯ 300 ಮೀ. ಉದ್ದಕ್ಕೆ (0 ಮೀ.ನಿಂದ 300ಮೀ.ವರೆಗೆ) ಭಾಗಶಃ ಪಾವತಿಸಲಾಗಿದೆ. ಉತ್ತರ ಬ್ರೇಕ್ ವಾಟರ್‌ಗೆ ಸಂಬಂಧಿಸಿದಂತೆ 300 ಮೀ. ನಂತರದ ರಚನೆಗೆ ಯಾವುದೇ ಪಾವತಿ ಮಾಡಲಾಗಿಲ್ಲ. ಬ್ರೇಕ್ ವಾಟರ್ ಹಾನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಲಾಗುತ್ತಿದ್ದು, ಅವೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ಕೃಷ್ಣ ಬಾಪಿರಾಜ್ ಹೇಳಿದರು.1975ರಲ್ಲಿ ನವ ಮಂಗಳೂರು ಬಂದರು ಕಾರ್ಯಾರಂಭ ಮಾಡಿದಂದಿನಿಂದ ಈ ಭಾಗದ ನಿರಾಶ್ರಿತ ಮೀನುಗಾರ ಸಮುದಾಯ ಮತ್ತು ಅವರ ಸಂಘಗಳು ನವಮಂಗಳೂರು ಬಂದರಿನಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಿಸುವಂತೆ ಮನವಿ ಮಾಡುತ್ತಲೇ ಬಂದಿದ್ದವು. ಅದರಂತೆ ಅಂತಿಮವಾಗಿ 2013ರಲ್ಲಿ ಸಾಗರ ರಾಜ್ಯಗಳ ಅಭಿವೃದ್ಧಿ ಮಂಡಳಿಯ 14ನೇ ಸಭೆಯಲ್ಲಿ ಮೀನುಗಾರಿಕಾ ಬಂದರನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ 196.51 ಕೋಟಿ ರು. ಅಂದಾಜು ವೆಚ್ಚದಲ್ಲಿ ಕುಳಾಯಿ ಮೀನುಗಾರಿಕೆ ಬಂದರಿನ ನಿರ್ಮಾಣ ಪ್ರಸ್ತಾವನೆಯನ್ನು ಭಾರತ ಸರ್ಕಾರ ಅಂಗೀಕರಿಸಿ ಕಾಮಗಾರಿ ಆರಂಭಿಸಲಾಗಿದೆ. ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಈ ಯೋಜನೆಯ ಪ್ರತಿಪಾದಕರಾಗಿದ್ದರೆ, ಎನ್‌ಎಂಪಿಎ ಅನುಷ್ಠಾನ ಏಜೆನ್ಸಿಯಾಗಿದೆ. ಸುರತ್ಕಲ್ ಎನ್‌ಐಟಿಕೆಯನ್ನು ಮೂರನೇ ವ್ಯಕ್ತಿ ತಪಾಸಣಾ ಏಜೆನ್ಸಿಯಾಗಿ ನೇಮಿಸಲಾಗಿದೆ. M/s SAPL GCC JV ಅವರಿಗೆ 147 ಕೋಟಿ ರು. ಮೊತ್ತದಲ್ಲಿ ಬ್ರೇಕ್ ವಾಟರ್ ನಿರ್ಮಾಣ, ಉಳಿದ ಸಿವಿಲ್ ಕಾಮಗಾರಿಗಳು, ಡ್ರೆಜ್ಜಿಂಗ್ ಮತ್ತಿತರ ಕಾಮಗಾರಿ ವಹಿಸಿದ್ದು, ಆ ಕೆಲಸ ಪ್ರಗತಿಯಲ್ಲಿದೆ ಎಂದವರು ವಿವರ ನೀಡಿದರು.
ಎನ್‌ಎಂಪಿಎ ಸಿವಿಎಲ್ ಎಂಜಿನಿಯರಿಂಗ್ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರವೀಣ್ ಶೆಣೈ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಣೇಶ್ ರಾವ್ ಇದ್ದರು.