ರಾಮನಗರ: ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ನವಗ್ರಹ ವಿಗ್ರಹಗಳನ್ನು ಹಾಳು ಮಾಡಿರುವ ವಿಚಾರದ ಸಂಬಂಧ ಬಿಜೆಪಿ, ಜೆಡಿಎಸ್ ಮುಖಂಡರು, ದೇವಾಲಯದ ಆಡಳಿತ ಸಮಿತಿ ಸದಸ್ಯರು ಸೋಮವಾರ ಎಸ್ಪಿ ರೋಹನ್ ಜಗದೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಗೌತಮ್‌ಗೌಡ, ನಗರದ ಪ್ರಮುಖ ಸ್ಥಳದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿದ್ದ ನವಗ್ರಹಗಳನ್ನು ಕಿಡಿಗೇಡಿಗಳು ಒಡೆದಿರುವುದು ಅಕ್ಷಮ್ಯ. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ. ಇದೊಂದು ಸಣ್ಣ ಪ್ರಕರಣ ಎಂದು ಪೊಲೀಸರು ನಿರ್ಲಕ್ಷಿಸಬಾರದು. ಬಂಧಿತ ಆರೋಪಿ ಹಿಂದೆ ಇರಬಹುದಾದ ವ್ಯಕ್ತಿ ಅಥವಾ ಸಂಘಟನೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಅವರಿಗೆ ಮನವಿ ಮಾಡಿದ್ದೇವೆ. ಕೃತ್ಯ ಎಸಗಿರುವ ಆರೋಪಿ ಬಿಹಾರ ಮೂಲದವನೆಂದು ಪೊಲೀಸರು ತಿಳಿಸಿದ್ದು, ಉತ್ತರಪ್ರದೇಶ, ಬಿಹಾರಗಳಲ್ಲಿ ಇಂತಹ ಕೃತ್ಯಗಳು ನಡೆಯುವುದಿಲ್ಲ. ಇಂತಹ ಕಿಡಿಗೇಡಿಗಳಿಗೆ ನಮ್ಮ ರಾಜ್ಯ ಸೇಫ್ ಹೆವನ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವರಿಗೆ ಹಿಂದೂ ಸಂಘಟನೆಗಳ ವಿರುದ್ದ ದಿನ ಬೆಳಗಾದರೆ ಮಾತನಾಡುವುದು ಮಾತ್ರ ಗೊತ್ತಿದೆ. ಹಿಂದೂ ಸಂಘಟನೆಗಳ ವಿರುದ್ದ, ಎಚ್.ಡಿ.ಕುಮಾರಸ್ವಾಮಿ ವಿರುದ್ದ ಮಾತನಾಡಿದರೆ ತಾವು ಇನ್ನು ಎತ್ತರದ ಸ್ಥಾನಕ್ಕೆ ಹೋಗಬಹುದು ಎಂಬುದು ಅವರ ಅನಿಸಿಕೆ. ಆದರೆ ರಾಜ್ಯದಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಅವರು ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಸೇರಿದಂತೆ ಅಧಿಕಾರಿಗಳು ತಾವು ಅಲಂಕರಿಸಿರುವ ಸ್ಥಾನಗಳಿಗೆ ನ್ಯಾಯ ಸಲ್ಲಿಸಬೇಕು. ಆರೋಪಿಯ ಹಿಂದೆ ಇರಬಹುದಾದ ವ್ಯಕ್ತಿ ಅಥವಾ ಸಂಘಟನೆಯನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕರೆ ಶಿವಲಿಂಗಪ್ಪ, ಪ್ರಮುಖರಾದ ಪ್ರಸಾದ್ ಗೌಡ, ಆರ್.ವಿ.ಸುರೇಶ್, ಚಂದನ್ ಮೊರೆ, ಎಸ್.ಆರ್.ನಾಗರಾಜು, ಪಿ.ವಿ.ಬದರಿನಾಥ, ರುದ್ರದೇವರು, ಎ.ರವಿ, ಸುಗ್ಗನಹಳ್ಳಿ ರಾಮಕೃಷ್ಣ, ಬೋರೇಗೌಡ, ಗೋವಿಂದರಾಜ್, ಕಿಶನ್, ಭಾನುಪ್ರಕಾಶ್, ದೇವಾಲಯ ಆಡಳಿತ ಮಂಡಳಿಯ ಗೌರವ ಅಧ್ಯಕ್ಷ ಶಂಕರಪ್ಪ, ಅಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಪ್ರಸನ್ನಕುಮಾರ್, ಸದಸ್ಯರಾದ ಚಂದ್ರಶೇಖರ್, ಮಂಜು, ನಾಗರಾಜು ಮತ್ತು ಅರ್ಚಕ ಚರಣ್ ಇತರರಿದ್ದರು.