ಮಂಟಪದಲ್ಲಿ ಕ್ಯಾಲಿಕಟ್ ಏಷಿಯನೆಟ್ ಸ್ಟುಡಿಯೋ ಅಂತೋಣಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದ್ದಾರೆ. ದಿಂಡಿಗಲ್‌ನ ಎಂ.ಪಿ. ಲೈಟಿಂಗ್ ಬೋರ್ಡ್ ವ್ಯವಸ್ಥೆ ಮಾಡಲಿದ್ದಾರೆ. ಮಂಟಪದಲ್ಲಿ ಸುಮಾರು 23 ಕಲಾಕೃತಿ ಬಳಸಲಾಗುತ್ತಿದೆ. 150ಕ್ಕೂ ಅಧಿಕ ಮಂದಿ ಸದಸ್ಯರು ತಂಡದಲ್ಲಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿಯಲ್ಲಿ 93ನೇ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ ಪರಶಿವನಿಂದ ಜಲಂಧರನ ಸಂಹಾರ ಎಂಬ ಕಥಾ ಸಾರಾಂಶ ಅಳವಡಿಸಲಾಗಿದ್ದು, ಸುಮಾರು ರು.20 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಳೆದ ಬಾರಿ ದಂಡಿನ ಮಾರಿಯಮ್ಮ ದೇವಾಲಯ ಸಮಿತಿಯ ಮಂಟಪ ದ್ವಿತೀಯ ಬಹುಮಾನ ಪಡೆಯುವುದರೊಂದಿಗೆ ಅಪಾರ ಜನ ಮೆಚ್ಚುಗೆ ಗಳಿಸಿತ್ತು. ನವೀನ್ ಅಂಬೆಕಲ್ ಅವರು ದಸರಾ ಸಮಿತಿ ಅಧ್ಯಕ್ಷರಾಗಿ, ಸತೀಶ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಟಪದಲ್ಲಿ ಕ್ಯಾಲಿಕಟ್ ಏಷಿಯನೆಟ್ ಸ್ಟುಡಿಯೋ ಅಂತೋಣಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದ್ದಾರೆ. ದಿಂಡಿಗಲ್‌ನ ಎಂ.ಪಿ. ಲೈಟಿಂಗ್ ಬೋರ್ಡ್ ವ್ಯವಸ್ಥೆ ಮಾಡಲಿದ್ದಾರೆ. ಮಂಟಪದಲ್ಲಿ ಸುಮಾರು 23 ಕಲಾಕೃತಿ ಬಳಸಲಾಗುತ್ತಿದೆ. 150ಕ್ಕೂ ಅಧಿಕ ಮಂದಿ ಸದಸ್ಯರು ತಂಡದಲ್ಲಿದ್ದಾರೆ. ವಿಯನ್ ಇಂಜಿನಿಯರಿಂಗ್ ವರ್ಕ್ ಪ್ಲಾಟ್‌ಫಾರ್ಮ್, ಚಲನವಲನವನ್ನು ತಂಡದ ಸದಸ್ಯರೇ ಮಾಡಲಿದ್ದಾರೆ. ಮಡಿಕೇರಿಯ ಅಶ್ರಫ್, ಪ್ರಕಾಶ್ ತಂಡ ಸ್ಪೆಷಲ್ ಎಫೆಕ್ಟ್ ನೀಡಲಿದೆ. ಬೆಂಗಳೂರಿನ ಎಲೆಕ್ಟ್ರೋ ಸೌಂಡ್ಸ್ ಇರಲಿದೆ. ಕಲಾಕೃತಿಗಳನ್ನು ಅಸ್ತಿತ್ವ ಆರ್ಟ್ನ ಸುನಿ ಮತ್ತು ಮನು ತಂಡ ಕಲಾತ್ಮಕವಾಗಿ ಮಾಡುತ್ತಿದೆ. ಮೋಹನ್ ಮತ್ತು ಸಂಪತ್ ಟ್ಯಾಕ್ಟರ್ ಸೆಟ್ಟಿಂಗ್, ಬಬಿನ್ ಮತ್ತು ತಂಡ ಕಥಾ ಸಾರಾಂಶ ರಚಿಸಿದ್ದಾರೆ. ದೇವಾಲಯದ ಇತಿಹಾಸ: ಮಡಿಕೇರಿ ಕೋಟೆಯ ಬಲ ಭಾಗದಲ್ಲಿರುವ ದೇಗುಲವೇ ಶ್ರೀ ದಂಡಿನ ಮಾರಿಯಮ್ಮ ದೇಗುಲ. ಇದಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಅಂದು ಕೊಡಗಿನ ರಾಜ ಪ್ರತಿಷ್ಠಾಪಿಸಿದ ಶಕ್ತಿ ದೇವತೆಗಳ ಪೈಕಿ ಈ ದೇಗುಲವೂ ಒಂದು. ರಾಜನು ದಂಡಿಗೆ(ಯುದ್ಧಕ್ಕೆ)ಹೊರಡುವಾಗ ಈ ದೇವಿಯೊಡನೆ ಸಮಾಲೋಚಿಸಿ, ಆಕೆಯ ಆಶೀರ್ವಾದ ಪಡೆದುಕೊಂಡೇ ಹೊರಡುತ್ತಿದ್ದರು ಎಂಬ ಪ್ರತೀತಿ ಇದೆ. ಪಾರ್ವತಿಯ ಸ್ವರೂಪಿಯಾಗಿರುವ ದೇವಿಯ ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಮತ್ತು ಇನ್ನಿತರ ಶಶ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರಾರಾಜಿಸುತ್ತಿದ್ದಾಳೆ. ಪ್ರಸ್ತುತ ಗರ್ಭಗುಡಿಯಲ್ಲಿರುವ ವಿಗ್ರಹವೇ ಮೂಲ ವಿಗ್ರಹವಾಗಿದೆ. ದೇಗುಲದ ಎದುರವಲ್ಲಿರುವ ಪವಿತ್ರ ಅರಳಿ ಮರವು ಪುರಾತನವಾದದ್ದು. ಇದಕ್ಕೆ ಅಶ್ವತ್ಥ ಉಪನಯನ ನೆರವೇರಿಸಲಾಗಿದೆ. ದೇಗುಲದ ಹಿಂಭಾಗದಲ್ಲಿ ನಾಗನ ವಿಗ್ರಹವಿದೆ. ಇಲ್ಲಿ ನಾಗನ ಸಂಚಾರವಿದೆ ಎನ್ನುತ್ತಾರೆ ಹಿರಿಯರು. ಸುಮಾರು 10 ವರ್ಷಗಳ ಹಿಂದೆ ಈ ದೇಗುಲ ನವೀಕರಣಗೊಂಡು, ಇದರ ಗೋಪುರವು ತಿರುಪತಿ ದೇವಸ್ಥಾನದ ಶೈಲಿಯನ್ನು ಹೊಂದಿದೆ. ದೇವಸ್ಥಾನದ ಒಳಭಾಗಕ್ಕೆ ಮಾರ್ಬಲ್ ಅಳವಡಿಸಲಾಗಿದೆ. ನಾಲ್ಕು ಶಕ್ತಿ ದೇವತೆಗಳ ಕರಗಗಳಲ್ಲಿ ದಂಡಿನ ಮಾರಿಯಮ್ಮ ಕರಗವೂ ಒಂದು ಎಂಬುದು ವಿಶೇಷ. ಈ ಬಾರಿಯ ಕರಗವನ್ನು ಮಾಜಿ ಸೈನಿಕ ಉಮೇಶ್ ಪೂಜಾರಿ ಹೊರುತ್ತಿದ್ದಾರೆ. 63 ವರ್ಷ ಪ್ರಾಯದ ಉಮೇಶ್ ಅವರಿಗೆ ಇದು 51ನೇ ವರ್ಷದ ಕರಗ ಸೇವೆಯಾಗಿದೆ. ಬಾಕ್ಸ್... ದೇವಿಗೆ ವಿಶೇಷ ಅಲಂಕಾರ ದಸರಾ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಅ.15ರಂದು ಬೆಳ್ಳಿಯ ಅಲಂಕಾರ, ಅ.16ರಂದು ಹೂವಿನ ಅಲಂಕಾರ, ಅ.17ರಂದು ಮಹಾಲಕ್ಷ್ಮಿ ಅಲಂಕಾರ, ಅ.18ರಂದು ಬಾಗಿನ ದೀಪ ಅಲಂಕಾರ, ಅ.19ರಂದು ಕಟೀಲು ದುರ್ಗಾ ಅಲಂಕಾರ, ಅ.20ರಂದು ಶಾರದದೇವಿ ಅಲಂಕಾರ, ಅ.21ರಂದು ತಾವರೆ ಅಲಂಕಾರ, ಅ.22ರಂದು ಬಳೆ ಅಲಂಕಾರ, ಅ.23ರಂದು ನಿಂಬೆ ಹಣ್ಣಿನ ಅಲಂಕಾರ, ಅ.24ರಂದು ವಜ್ರದ ಅಲಂಕಾರ ಮಾಡಲಾಗುತ್ತದೆ. ಈ ಬಾರಿ ಪರಶಿವನಿಂದ ಜಲಂಧರನ ಸಂಹಾರ ಎಂಬ ಕಥಾ ಸಾರಾಂಶ ಆಯ್ದುಕೊಂಡಿದ್ದು, ವಿಶೇಷ ರೀತಿಯಲ್ಲಿ ಮಂಟಪವನ್ನು ಹೊರ ತರಲು ನಮ್ಮ ಸಮಿತಿ ಶ್ರಮಿಸುತ್ತಿದೆ. ಈಗಾಗಲೇ ಮಂಟಪ ಕಾರ್ಯ ಭರದಿಂದ ಸಾಗಿದೆ. ಶೋಭಾಯಾತ್ರೆಯ ಸಂದರ್ಭ ತೀರ್ಪುಗಾರಿಕೆ ಪ್ರದರ್ಶನದೊಂದಿಗೆ 8 ಪ್ರದರ್ಶನ ನೀಡಲು ನಿರ್ಧರಿಸಲಾಗಿದೆ ಎಂದು ದಂಡಿನ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ನವೀನ್ ಅಂಬೆಕಲ್ ತಿಳಿಸಿದ್ದಾರೆ. 93ನೇ ವರ್ಷದ ಅದ್ದೂರಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದಸರಾ ಉತ್ಸವ ಹಿನ್ನೆಲೆಯಲ್ಲಿ ಈ ಬಾರಿ ಹತ್ತು ದಿನ ಕೂಡ ದೇವಿಯ ಮೂರ್ತಿಗೆ ಒಂದೊಂದು ವಿಭಿನ್ನ ಅಲಂಕಾರ ಮಾಡಲಾಗುತ್ತಿದ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.