ಸಂಪತ್ ತರೀಕೆರೆ
ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸಕ್ಕೆ ಆಹಾರ ಇಲಾಖೆ ಚುರುಕು ನೀಡಿದ್ದು, ಬಿಪಿಎಲ್ ಹೊಂದಿರುವ ಲಕ್ಷಾಂತರ ಕುಟುಂಬಗಳಿಗೆ ಸಂಕಷ್ಟ ಶುರುವಾಗಲಿದೆ.
ಈ ನಡುವೆಯೇ ಬಿಪಿಎಲ್ ಕಾರ್ಡ್ ಪಡೆಯಲು ಈ ಹಿಂದೆ ನಿಗದಿ ಮಾಡಿರುವ ಅವೈಜ್ಞಾನಿಕ ಮಾನದಂಡ ಬದಲಾವಣೆ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,666 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ.
ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ.ಬಚಾವ್:
ಅರ್ಹತೆ ಇಲ್ಲದೆ, ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ಗಳನ್ನು ಪಡೆದಿರುವವರು ಹಿಂದಿರುಗಿಸುವಂತೆ ಆಹಾರ ಇಲಾಖೆ ಈಗಾಗಲೇ ಅನೇಕ ಬಾರಿ ಕಾಲಾವಕಾಶ ನೀಡಿತ್ತು. ನಿಗದಿತ ಅವಧಿಯಲ್ಲಿ ಅನರ್ಹರು ಪಡೆದ ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿಸದಿದ್ದರೆ ಕ್ರಿಮಿನಲ್ ಕೇಸು ದಾಖಲಿಸುವ ಎಚ್ಚರಿಕೆಯನ್ನು ಕೂಡ ನೀಡಿತ್ತು. ಹೀಗಾಗಿ ಅನೇಕರು ಬಿಪಿಎಲ್, ಅಂತ್ಯೋದಯ ಕಾರ್ಡುಗಳನ್ನು ಹಿಂದಿರುಗಿಸುವ ಮೂಲಕ ಕಾನೂನು ಕ್ರಮಕ್ಕೆ ಒಳಗಾಗುವುದರಿಂದ ಪಾರಾಗಿದ್ದರು.ಆದರೆ ಇನ್ನೂ ಅನೇಕರು ಅನರ್ಹರಾಗಿದ್ದರೂ ಫಲಾನುಭವಿಗಳಂತೆ ಸವಲತ್ತು ಪಡೆಯುತ್ತಿರುವುದರ ಬಗ್ಗೆ ಆಹಾರ ಇಲಾಖೆ ಎಚ್ಚೆತ್ತುಕೊಂಡು ಹುಡುಕಾಟ ಆರಂಭಿಸಿತ್ತು. 2018ರಿಂದ 2020ರವರೆಗೆ ಬರೋಬ್ಬರಿ 12,47,151 ಕಾರ್ಡ್‌ಗಳನ್ನು ರದ್ದು ಮಾಡಲಾಗಿದ್ದು, ಈ ಪೈಕಿ 9.301 ಅಂತ್ಯೋದಯ, 10,18,963 ಬಿಪಿಎಲ್ ಕಾರ್ಡುಗಳಿವೆ.
ಅನರ್ಹರ ಹುಡುಕಾಟ:
ಇದೀಗ ಮತ್ತೆ ಅನರ್ಹ ಅಂತ್ಯೋದಯ, ಬಿಪಿಎಲ್ ಫಲಾನುಭವಿಗಳ ಹುಡುಕಾಟ ಆರಂಭಿಸಿರುವ ಅಹಾರ ಇಲಾಖೆ ಈ ಹಿಂದೆ ಹೊರಡಿಸಿದ್ದ ಮಾನದಂಡಗಳ ಪಟ್ಟಿ ಹಿಡಿದುಕೊಂಡು ಪತ್ತೆ ಕಾರ್ಯ ಆರಂಭಿಸಿದೆ. ತೆರಿಗೆ ಪಾವತಿ ಮಾಡುತ್ತಿರುವ ಸದಸ್ಯರ ಕುಟುಂಬ, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿರುವ ಕುಟುಂಬ, ವಿವಿಧ ಮಂಡಳಿ, ನಿಗಮಗಳ ಕಾಯಂ ನೌಕರರಿರುವ ಕುಟುಂಬ, ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರು, ಮನೆಗಳನ್ನು ಬಾಡಿಗೆಗೆ ಕೊಟ್ಟು ಜೀವಿಸುವವರು, 7.5 ಎಕರೆಗಿಂತ ಹೆಚ್ಚು ಒಣ ಮತ್ತು ನೀರಾವರಿ ಜಮೀನು ಹೊಂದಿರುವವರು, ಸ್ವಂತಕ್ಕೆಂದು ನಾಲ್ಕು ಚಕ್ರದ ವಾಹನ ಇಟ್ಟುಕೊಂಡಿರುವವರು ಬಿಪಿಎಲ್, ಅಂತ್ಯೋದಯ ಕಾರ್ಡು ಪಡೆಯುವಂತಿಲ್ಲ.
ಈ ಹಿಂದೆಯೇ ಆಹಾರ ಇಲಾಖೆ ತೆರಿಗೆ ಪಾವತಿಸುವವರ ಪಟ್ಟಿ ಪಡೆದು, ಅಂತಹ ಕುಟುಂಬಗಳ ಬಿಪಿಎಲ್ ಕಾರ್ಡು ರದ್ದು ಪಡಿಸಲು ಕ್ರಮಕೈಗೊಂಡಿತ್ತು. ಜೊತೆಗೆ ಆರ್‌ಟಿಓ ಕಚೇರಿಗಳಲ್ಲಿ ನೋಂದಣಿ ಮಾಡಿದ ವಾಹನಗಳನ್ನು ಆಧಾರ್ ಮೂಲಕ ಪತ್ತೆ ಹಚ್ಚಿ ಅಂತಹ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಿಗೂ ಕ್ರಮಕೈಗೊಂಡಿದ್ದು, ಇದೀಗ ಈ ಕಾರ್ಯವನ್ನು ಮುಂದುವರೆಸಿದೆ.
ಒಂದು ವೇಳೆ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅದನ್ನು ಆಯಾ ತಾಲೂಕಿನ ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ವಾಪಸ್ ನೀಡಬೇಕು. ಇಲ್ಲದಿದ್ದರೆ ಆಹಾರ ಇಲಾಖೆಯೇ ಪತ್ತೆ ಮಾಡಿದಂತೆ ಅಂತವರಿಂದ ಇದುವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಅಕ್ಕಿ ಅಥವಾ ಇತರೆ ಧಾನ್ಯಗಳ ಮೊತ್ತವನ್ನು (ಅಕ್ಕಿ ಕೆಜಿಗೆ ತಲಾ 35 ರು.ನಂತೆ) ವಸೂಲಿ ಮಾಡುಲಾಗುತ್ತದೆ. ಜೊತೆಗೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಲಾಗಿದೆ.
ಅವೈಜ್ಞಾನಿಕ ಮಾನದಂಡ ರದ್ದಿಗೆ ಆಗ್ರಹ:ರಾಜ್ಯದಲ್ಲಿ ಶೇ.80ರಷ್ಟು ಮಂದಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಸೇರಿ ಇತ್ಯಾದಿ ವಾಹನ ಹೊಂದಿರುವ ಕುಟುಂಬಗಳಿವೆ. ಪ್ರತಿ ಮನೆ ಮನೆಯಲ್ಲೂ ಒಂದಿಲ್ಲೊಂದು ವಾಹನಗಳಿವೆ. ಪ್ರತಿಶತ ಸರಾಸರಿ 450 ರು.ಗಿಂತ ಅಧಿಕ ವಿದ್ಯುತ್ ಬಿಲ್ ಪಾವತಿಸುತ್ತಾರೆ.
ಇಂತಹ ಮಾನದಂಡಗಳ ಅಡಿಯಲ್ಲಿ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಬಾರದು. ದಿನೇ ದಿನೆ ಅಗತ್ಯವಸ್ತುಗಳ ಬೆಲೆ ಹೆಚ್ಚುತ್ತಿದ್ದು 18ರಿಂದ 20 ಸಾವಿರ ವೇತನ ಪಡೆದರೂ ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿ ಇದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು. ಆರ್ಥಿಕವಾಗಿ ಸಬಲರಾಗಿದ್ದು ಸುಳ್ಳು ದಾಖಲೆಗಳಿಂದ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಮಾತ್ರ ರದ್ದುಪಡಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಯಾರು ಅನರ್ಹರು?
ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿರುವ ಕುಟುಂಬ, ಮನೆಗಳನ್ನು ಬಾಡಿಗೆಗೆ ಕೊಟ್ಟಿರುವವರು, 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಸ್ವಂತಕ್ಕೆಂದು ನಾಲ್ಕು ಚಕ್ರದ ವಾಹನ ಹೊಂದಿರುವವರು ಬಿಪಿಎಲ್, ಅಂತ್ಯೋದಯ ಕಾರ್ಡು ಪಡೆಯುವಂತಿಲ್ಲ.
ಸಿಕ್ಕಿಬಿದ್ದರೆ ಏನು ಶಿಕ್ಷೆ?
ವೇಳೆ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದು ಸಾಬೀತಾದರೆ ಇದುವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದ ಅಕ್ಕಿ ಅಥವಾ ಇತರೆ ಧಾನ್ಯಗಳ ಮೊತ್ತವನ್ನು (ಅಕ್ಕಿ ಕೆಜಿಗೆ ತಲಾ 35 ರು.ನಂತೆ) ಮರಳಿಸಬೇಕು. ಜೊತೆಗೆ ಕ್ರಿಮಿನಲ್ ಕೇಸು ಎದುರಿಸಬೇಕು.