ವಿಶ್ವನಾಥ ಮಲೇಬೆನ್ನೂರು
ರಾಜಧಾನಿ ಬೆಂಗಳೂರಿನ 10 ಶುದ್ಧಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿಯಿಂದ ಪೂರೈಕೆ ಆಗುವ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆಯಾಗಿರುವ ಆತಂಕಕಾರಿ ವರದಿ ಬಂದ ಹಿನ್ನೆಲೆಯಲ್ಲಿ ಆ ಘಟಕಗಳು ಮತ್ತು ಕೊಳವೆ ಬಾವಿಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ಬೊಮ್ಮನಹಳ್ಳಿಯಲ್ಲಿ 5, ಪೂರ್ವ ಹಾಗೂ ದಕ್ಷಿಣ ವಲಯದ ತಲಾ 2 ಹಾಗೂ ಮಹದೇವಪುರ ವಲಯದ ಒಂದು ಕಡೆ ಬ್ಯಾಕ್ಟೀರಿಯಾ ಕಂಡು ಬಂದಿದೆ. ಈ ನೀರಿನ ಘಟಕ ಹಾಗೂ ಕೊಳವೆ ಬಾವಿಗಳನ್ನು ಬಿಬಿಎಂಪಿಯಿಂದ ಕ್ಲೋರಿನೇಷನ್ ಮಾಡಿ ಅಪಾಯಕಾರಿ ಬ್ಯಾಕ್ಟೀರಿಯಗಳನ್ನು ನಾಶ ಪಡಿಸಲಾಗಿದೆ.ಕಳೆದ ಮೇ ನಲ್ಲಿ ರಾಜ್ಯದ ಕೆಲವು ಕಡೆ ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಮಿಶ್ರಣಗೊಂಡ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಗಳು, ಬೆಂಗಳೂರಿಗೆ ಪೂರೈಕೆ ಆಗುವ ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಜತೆಗೆ, ನೀರಿನಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ, ಬಿಬಿಎಂಪಿ ವ್ಯಾಪ್ತಿಯ ಕೊಳವೆ ಬಾವಿಯಿಂದ ಪೂರೈಕೆಯಾಗುವ ನೀರು, ಶುದ್ಧಕುಡಿಯುವ ನೀರಿನ ಘಟಕದ ನೀರು ಹಾಗೂ ಬೆಂಗಳೂರು ಜಲಮಂಡಳಿಯಿಂದ ಸರಬರಾಜು ಮಾಡುವ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ನಗರದಲ್ಲಿ 1,696 ಕೊಳವೆ ಬಾವಿ ಹಾಗೂ 1384 ಶುದ್ಧಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 217 ಕೊಳವೆ ಬಾವಿ ಹಾಗೂ 1218 ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಇದರಲ್ಲಿ 474 ಲ್ಯಾಬ್‌ನ ಪರೀಕ್ಷೆ ವರದಿ ಲಭ್ಯವಾಗಿದ್ದು, ಈ ಪೈಕಿ 10 ಮೂಲಗಳ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಗಳು ಇರುವುದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಮೈಕ್ರೋ ಬಯೋಲಾಜಿಕಲ್ ಟೆಸ್ಟ್:
3 ಸಾವಿರ ಪರೀಕ್ಷೆ
ನೀರು ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದ್ದು, ಸಮಸ್ಯೆ ಕಂಡು ಬಂದರೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇದೀಗ ಮುಂಗಾರು ಮಳೆ ಆರಂಭಗೊಂಡಿದ್ದು, ನೀರು ಪೂರೈಕೆಯ ಮೂಲಗಳಿಗೆ ಕಲುಷಿತ ನೀರು ಸೇರುವ ಸಾಧ್ಯತೆ ಇದೆ. ಹೀಗಾಗಿ, ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಕುದಿಸಿ ಕುಡಿಯುವುದು ಉತ್ತಮ.