ಹವ್ಯಾಸಗಳಿಂದ ಉನ್ನತ ಸಾಧನೆ ಸಾಧ್ಯ: ಡಾ. ವೀರೇಂದ್ರ ಹೆಗ್ಗಡೆ

KannadaprabhaNewsNetwork |  
Published : Aug 03, 2026, 03:00 AM IST
ಧರ್ಮಸ್ಥಳದಲ್ಲಿ ಪುಸ್ತಕಗಳ ಲೋಕಾರ್ಪಣೆ, ಅಂಚೆ-ಕುಂಚ ಸ್ಪರ್ಧೆ ವಿಜೇತರ ಪುರಸ್ಕಾರ ಸಮಾರಂಭ. | Kannada Prabha

ಸಾರಾಂಶ

ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣದ ಮೂಲಕ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ, ಚಿತ್ರಕಲೆ, ಪ್ರಕೃತಿ-ಪರಿಸರ ವೀಕ್ಷಣೆ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಉನ್ನತ ಸಾಧನೆ ಮಾಡಬಹುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಬೆಳ್ತಂಗಡಿ: ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣದ ಮೂಲಕ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ, ಚಿತ್ರಕಲೆ, ಪ್ರಕೃತಿ-ಪರಿಸರ ವೀಕ್ಷಣೆ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಉನ್ನತ ಸಾಧನೆ ಮಾಡಬಹುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ವತಿಯಿಂದ ಪ್ರಕಟಿಸಲಾದ ಜ್ಞಾನ ಚಂದನ ಮತ್ತು ಜ್ಞಾನ ನಂದನ ಕೃತಿಗಳನ್ನು ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವೀಯತೆ ಬೆಳೆಸಿಕೊಳ್ಳಿ: ದೀಪಾ ಹಿರೇಗುತ್ತಿ

ಅಹಂ ಮತ್ತು ಕೀಳರಿಮೆ ತೊರೆದು ಇತರರಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಗೌರವಿಸಬೇಕು. ಸಣ್ಣ ಸಣ್ಣ ಸತ್ಕಾರ್ಯಗಳನ್ನು ಮಾಡಿದರೂ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅಂಕಣ ಬರಹಗಾರ್ತಿ ದೀಪಾ ಹಿರೇಗುತ್ತಿ ಹೇಳಿದರು.ಅವರು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವುದು ಭಾರತದ ಸೌಂದರ್ಯ ಆಗಿದೆ. ಬದುಕಿನಲ್ಲಿ ಬರುವ ನೋವು, ಸಂಕಟ, ದುಖಃ-ದುಮ್ಮಾನಗಳು ಹಾಗೂ ದೈಹಿಕ ಮತ್ತು ಮಾನಸಿಕ ಆಘಾತಗಳನ್ನು ಸಾಧನೆಗೆ ಕಚ್ಛಾವಸ್ತುಗಳನ್ನಾಗಿ ಬಳಸಿ ಉನ್ನತ ಸೇವೆ-ಸಾಧನೆ ಮಾಡಬಹುದು.

ಪುಸ್ತಕ ಓದುವುದರಿಂದ ನಮ್ಮ ಕಲ್ಪನೆಯ ಪರಿಧಿ ವಿಸ್ತಾರವಾಗುತ್ತದೆ. ಚಿಂತನ-ಮಂಥನ ಬೆಳೆಯುತ್ತದೆ. ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ, ಬುದ್ಧಿವಂತಿಕೆ, ಕೌಶಲ ಇರುತ್ತದೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಶಿಕ್ಷಕರು, ರಕ್ಷಕರು ಮತ್ತು ಮಕ್ಕಳ ಸಂಘಟಿತ ಪ್ರಯತ್ನದಿಂದ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಆದರೆ, ಇಂದು ಕಂಪ್ಯೂಟರ್, ಮೊಬೈಲ್ ಫೋನ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೋಹದ ಜಾಲದ ಪ್ರಭಾವದಿಂದ ಎಲ್ಲರೂ ಭಾವನಾರಹಿತವಾಗಿ, ಮಾನವೀಯತೆ ಕಳೆದುಕೊಂಡು ಯಂತ್ರಮಾನವರಾಗುತ್ತಿರುವುದು ಖೇದಕರವಾಗಿದೆ ಎಂದರು.

ನೈತಿಕ ಮೌಲ್ಯಗಳನ್ನು ಉದ್ದೀಪನಗೊಳಿಸುವ ಲಕ್ಷಾಂತರ ಪುಸ್ತಕಗಳನ್ನು ಪ್ರತಿವರ್ಷ ಪ್ರಕಟಿಸಿ, ಶಾಲೆಗಳಲ್ಲಿ ವಿತರಿಸಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಡಿ. ವೀರೇಂದ್ರ ಹೆಗ್ಗಡೆಯವರ ಸೇವೆ ಶ್ಲಾಘನೀಯ ಎಂದರು.

ಮನಸ್ಸಿನ ನಿಯಂತ್ರಣ ಬೇಕು: ಅಂಚೆ-ಕುಂಚ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ವಿತರಿಸಿದ ಚಲನಚಿತ್ರ ನಟ ಅಭಿಜಿತ್ ಮಾತನಾಡಿ, ಪುಸ್ತಕಗಳನ್ನು ಓದಿ ವಿದ್ಯೆ ಮತ್ತು ಬುದ್ಧಿಯನ್ನು ಬೆಳೆಸಿಕೊಂಡಾಗ ನಾವು ವಿವೇಕವುಳ್ಳ ಆದರ್ಶ ವ್ಯಕ್ತಿಗಳಾಗಿ ಉತ್ತಮ ಸಾಧನೆ ಮಾಡಬಹುದು. ಜಗತ್ತಿನಲ್ಲಿ ಒಳ್ಳೆದು, ಕೆಟ್ಟದು – ಎರಡೂ ಇರುತ್ತವೆ. ನಮ್ಮ ಮನಸ್ಸಿನ ನಿಯಂತ್ರಣದೊಂದಿಗೆ ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ ಕೆಟ್ಟದ್ದನ್ನು ಕಡೆಗಣಿಸಬೇಕು ಎಂದು ಅವರು ಸಲಹೆ ನೀಡಿದರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಬೆಂಗಳೂರಿನಲ್ಲಿರುವ ಕ್ಷೇಮವನದ ಸಿಇಒ ಶ್ರದ್ಧಾಅಮಿತ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಉಪಸ್ಥಿತರಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಶೇಖರ್ ಕಡ್ತಲ ಧನ್ಯವಾದವಿತ್ತರು. ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಕಳ್ಳಸಾಗಾಣಿಕೆಯ ಜಾಗೃತಿ ಮೂಡಿಸುವುದು ಮುಖ್ಯ: ಅರವಿಂದ ಹಾಗರಗಿ
ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿ ವಶಕ್ಕೆ