ಬೆಂಗಳೂರು : ಕಾನೂನು ಹೋರಾಟದ ಪ್ರಯಾಸದ ಬಳಿಕ ಕನ್ನಡ ಚಲನಚಿತ್ರ ನಟ ಹಾಗೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಕೊನೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಟಿವಿ ಹಾಗೂ ಹೆಚ್ಚುವರಿ ಹೊದಿಕೆ ಸೌಲಭ್ಯ ಲಭಿಸಿದೆ.
ಕಾರಾಗೃಹ ನಿಯಮಾನುಸಾರ ದರ್ಶನ್ ಅವರ ಸೆಲ್‌ಗೆ ಚಿಕ್ಕ ಟಿವಿ ಹಾಗೂ ಕಂಬಳಿ ನೀಡಲಾಗಿದೆ. ಆದರೆ ತಲೆ ದಿಂಬು ನೀಡಿಕೆಗೆ ನಿಯಮದಲ್ಲಿ ಅವಕಾಶವಿಲ್ಲ. ಕಾನೂನು ಮೀರಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಜೈಲಿನಲ್ಲಿ ತಮಗೆ ಕಂಬಳಿ, ತಲೆದಿಂಬು ಹಾಗೂ ಟಿವಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಕೊನೆಗೆ ವಾದ-ಪ್ರತಿವಾದ ನಡೆದು ನ್ಯಾಯಾಲಯವು, ಕಾರಾಗೃಹದ ನಿಯಮಾವಳಿ ಅನುಸಾರ ದರ್ಶನ್ ಅವರ ಬೇಡಿಕೆ ಪರಿಗಣಿಸುವಂತೆ ಆದೇಶಿಸಿತ್ತು. ಸೆಲ್‌ಗೆ ಟಿವಿ ಅಥವಾ ಯಾವ ಸೆಲ್‌ನಲ್ಲಿ ಟಿವಿ ಇದೆಯೇ ಅಲ್ಲಿಗೆ ಅವರನ್ನು ಕರೆದೊಯ್ದು ತೋರಿಸುವಂತೆ ಆದೇಶದಲ್ಲಿ ನ್ಯಾಯಾಲಯವು ಉಲ್ಲೇಖಿಸಿತ್ತು. ಈ ಕಾನೂನು ಹೋರಾಟದ ಬಳಿಕ ದರ್ಶನ್ ಅವರಿಗೆ ಟಿವಿ ಹಾಗೂ ಕಂಬಳಿಯನ್ನು ಕಾರಾಗೃಹ ಅಧಿಕಾರಿಗಳು ಕಲ್ಪಿಸಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಹಾಗೂ ನಟ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಅವರಿಗೆ ಮನೆ ಊಟ ನೀಡಿಕೆ ಸಂಬಂಧ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ನ್ಯಾಯಾಲಯಕ್ಕೆ ಬುಧವಾರ ಮೇಲ್ಮನವಿ ಸಲ್ಲಿಸಿದೆ.ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಪವಿತ್ರಾಗೌಡ ಅವರಿಗೆ ಮನೆ ಊಟ ಪೂರೈಕೆ ಸಂಬಂಧ ಸಲ್ಲಿಸಿರುವ ಮೇಲ್ಮನವಿ ಗುರುವಾರ ವಿಚಾರಣೆಗೆ ಬರಲಿದೆ. ಈ ಸಂಬಂಧ ನ್ಯಾಯಾಲಯ ನೀಡುವ ಆದೇಶ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿಗೆ ಉತ್ತಮ ಆಹಾರ ನೀಡಲಾಗುತ್ತಿದೆ. ಹೀಗಾಗಿ ಮನೆ ಆಹಾರ ನೀಡಿಕೆ ಅಗತ್ಯವಿಲ್ಲ. ಈ ವಿಚಾರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡ ಅವರಿಗೆ ಮನೆ ಊಟ ಪಡೆಯಲು ನ್ಯಾಯಾಲಯ ಅನುಮತಿ ನೀಡಿ ಆದೇಶಿಸಿತ್ತು.