‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’

KannadaprabhaNewsNetwork |  
Published : Sep 10, 2025, 01:03 AM IST
ದರ್ಶನ್‌ | Kannada Prabha

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕೆಂಬ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

 ಬೆಂಗಳೂರು :  ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕೆಂಬ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಅನುಮತಿ ನೀಡಿ ಆದೇಶಿಸಬೇಕು ಎಂದು ಕೋರಿ ಪರಪ್ಪನ ಅಗ್ರಹಾರ ಜೈಲಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಸೆಷನ್ಸ್ ಕೋರ್ಟ್ ಬಳ್ಳಾರಿಗೆ ವರ್ಗಾಯಿಸಲು ಸಕಾರಣವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.

ಇದೇ ವೇಳೆ ತನಗೆ ಹಾಸಿಗೆ, ತಲೆದಿಂಬು ಮತ್ತು ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ಪುರಸ್ಕರಿಸಿದ್ದಾರೆ.

ವಿಚಾರಣಾಧೀನ ಕೈದಿಯಾಗಿರುವ ದರ್ಶನ್‌ಗೆ ಕಾರಾಗೃಹಗಳ ಕೈಪಿಡಿಯ ಅನುಸಾರ ಯಾವೆಲ್ಲ ಕನಿಷ್ಠ ಸೌಲಭ್ಯಗಳು ಕೊಡಬಹುದೋ ಅವುಗಳನ್ನು ಒದಗಿಸಬೇಕು ಎಂದು ಜೈಲಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಜೊತೆಗೆ, ಜೈಲಿನ ತನ್ನ ಕೋಣೆಯ ಮುಂದಿನ ಕಾರಿಡಾರ್‌ನಲ್ಲಿ ವಾಕಿಂಗ್‌ ಮಾಡಲು ದರ್ಶನ್‌ಗೆ ಅನುಮತಿಸುವಂತೆಯೂ ಜೈಲು ಅಧಿಕಾರಿಗಳಿಗೆ ಇದೇ ವೇಳೆ ನಿರ್ದೇಶಿಸಿದರು.

ನೆಲದ ಮೇಲೆ ಮಲಗುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕೈಯಲ್ಲಿ ತುಂಬಾ ನೋವು ಕಾಣಿಸಿಕೊಂಡಿದೆ. ಒಂದು ಬೆರಳು ಅಳುಗಾಡಿಸಲೂ ಆಗುತ್ತಿಲ್ಲ. ಹೀಗಾಗಿ, ಹಾಸಿಗೆ, ತಲೆದಿಂಬು ಮತ್ತು ಹೊದಿಕೆ, ಸ್ವೆಟರ್‌ ಪೂರೈಸಲು ಜೈಲು ಅಧಿಕಾರಿಗಳಿಗೆ ಸೂಚಿಸಿ ಎಂದು ದರ್ಶನ್‌ ಕೋರಿದ್ದರು. ಮಂಗಳವಾರ ನ್ಯಾಯಾಲಯ ಹೊರಡಿಸಿದ ಈ ಆದೇಶ ನೆಲದ ಚಾಪೆ ಮೇಲೆ ಮಲಗುತ್ತಿದ್ದ ದರ್ಶನ್‌ಗೆ ಕೊಂಚ ಸಮಾಧಾನ ತರಿಸಿದೆ.

ಬಳ್ಳಾರಿಗೆ ವರ್ಗಾಯಿಸಲು ಸಕಾರಣವಿಲ್ಲ:

ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಅನುಮತಿ ನೀಡಲು ಕೋರಿ ಜೈಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌, ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿತ್ತು. ಜಾಮೀನು ರದ್ದುಪಡಿಸಿರುವ ಆದೇಶದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ಆರೋಪಿಗಳು ಜೈಲಿನಲ್ಲಿ ತೋರಿರುವ ವರ್ತನೆಗಳನ್ನು ಗಮನಿಸಿದೆ. ಹಾಗಾಗಿ, ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲು ಆದೇಶ ನೀಡಬೇಕು. ಕೋರ್ಟ್‌ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಬಹುದು ಎಂದು ತಿಳಿಸಿದ್ದರು.

ಇದೀಗ ಜೈಲಧಿಕಾರಿಗಳ ಈ ಮನವಿ ಒಪ್ಪದ ನ್ಯಾಯಾಲಯ, ದರ್ಶನ್‌ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಕಾರಣಗಳು ಇಲ್ಲ ಎಂದು ತಿಳಿಸಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ದುರ್ನಡತೆ ತೋರಿದರೆ, ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಕುರಿತು ಕಾರಾಗೃಹಗಳ ಐಜಿಪಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.

ಕನಿಷ್ಠ ಸೌಲಭ್ಯವೂ ಇಲ್ಲ:

ಈ ಅರ್ಜಿಯ ಹಿಂದಿನ ವಿಚಾರಣೆ ವೇಳೆ ದರ್ಶನ್‌ಗೆ ಹಾಸಿಗೆ, ತಲೆದಿಂಬು, ಹೊದಿಕೆ, ಸ್ವೆಟರ್‌ ಸೇರಿ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ. ದರ್ಶನ್‌ ಶೂ ಹಾಕಿಕೊಂಡಿದ್ದರೆ ಅದನ್ನು ಜೈಲಾಧಿಕಾರಿಗಳು ಬಿಚ್ಚಿಸುತ್ತಾರೆ. ಊಟದ ತಟ್ಟೆ ಎಸೆದು ಹೋಗುತ್ತಾರೆ. ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನು ಜೈಲಧಿಕಾರಿಗಳು ಕೊಡಲಿ. ಈ ಕುರಿತು ಆದೇಶ ಹೊರಡಿಸಬೇಕು ಎಂದು ಕೋರಿ ದರ್ಶನ್‌ ಪರ ವಕೀಲ ಎಸ್‌.ಸುನೀಲ್‌ ಕುಮಾರ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

PREV
Read more Articles on

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ