ಕನ್ನಡಪ್ರಭ ವಾರ್ತೆ ರಾಯಚೂರು
ಹೆಚ್ಚಿನ ಬಡ್ಡಿ ಆಮಿಷಕ್ಕೊಳಗಾದ ಜನರು ದರ್ವೇಶ ಗ್ರೂಪ್ ಕಂಪನಿಯಲ್ಲಿ ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ಈಗ ಕಂಪನಿ ಮಾಲೀಕ ಮಹ್ಮದ್ ಹುಸೇನ್ ಸುಜ ನಾಪತ್ತೆಯಾಗಿದ್ದು, ಹಣ ಹೂಡಿಕೆ ಮಾಡಿದವರು ಆತಂಕಕ್ಕೊಳಗಾದ ಹಿನ್ನೆಲೆ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಬೆನ್ನಲ್ಲಿಯೇ ರಾಯಚೂರು ನಗರಕ್ಕೆ ದೌಡಾಯಿಸಿದ ಸಿಐಡಿ ತಂಡ ತನಿಖೆ ಆರಂಭಿಸಿದೆ.ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಶುಕ್ರವಾರ ಆಗಮಿಸಿದ ಸಿಐಡಿ ವರಿಷ್ಠಾಧಿಕಾರಿ (ಎಸ್ಪಿ) ಪುರುಷೋತಮ್ ನೇತೃತ್ವದ ಐದು ಜನರ ತಂಡವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂಪನಿ ಕುರಿತ ಮಾಹಿತಿ ಪಡೆದಿದ್ದಾರೆ. ಏನಿದು ಪ್ರಕರಣ:ಕಳೆದ ಎರಡ್ಮೂರು ವರ್ಷಗಳಿಂದ ಶೇ.10ರಿಂದ 5ರಷ್ಟು ಬಡ್ಡಿದರದ ಆಮಿಷಕ್ಕೆ ತುತ್ತಾಗಿ ನೂರಾರು ಜನರು ನಗರದ ದರ್ವೇಶ ಗ್ರೂಪ್ ಕಂಪನಿಯಲ್ಲಿ ಕೋಟ್ಯಂತರ ರು.ಹಣ ಹೂಡಿಕೆ ಮಾಡಿದ್ದರು. ನಗರ ಸೇರಿ ಜಿಲ್ಲೆ ವಿವಿಧ ತಾಲೂಕುಗಳಲ್ಲಿನ ಶ್ರೀಮಂತ, ಮಧ್ಯಮ ಹಾಗೂ ಬಡ ಜನರು ಹೆಚ್ಚಿನ ಬಡ್ಡಿ ಆಸೆಯಿಂದಾಗಿ ಮನೆ, ಜಮೀನು, ಚಿನ್ನಾಭರಣ ಸೇರಿ ಆಸ್ತಿ ಮಾರಾಟ ಮಾಡಿ, ಹೊರಗಡೆ ಕಡಿಮೆ ಬಡ್ಡಿಗೆ ಹಣ ತಂದು ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಎರಡು ತಿಂಗಳಿನಿಂದ ಬಡ್ಡಿ ಹಾಗೂ ಹೂಡಿಕೆ ಮಾಡಿದ್ದ ಹಣ ವಾಪಸ್ಸು ನೀಡದಕ್ಕೆ ಹೂಡಿಕೆದಾರರು ತೀವ್ರ ಆತಂಕಗೊಂಡಿದ್ದು, ಕಂಪನಿ ಮಾಲೀಕ ಮಹ್ಮದ್ ಸಹ ಹಲವು ದಿನಗಳಿಂದ ನಾಪತ್ತೆಯಾಗಿದ್ದರಿಂದ ಹಣ ವಾಪಸ್ಸು ನೀಡುವಂತೆ ಜನರು ನಿತ್ಯ ಕಂಪನಿ ಕಚೇರಿ ಮುಂದೆ ಜಮಾಯಿಸಿ ದಾಂಧಲೆ ನಡೆಸಿ ಒತ್ತಡ ಹೇರುತ್ತಿದ್ದಾರೆ.
ಹಣ ವಾಪಸ್ಸು ನೀಡುವಂತೆ ಕಳೆದ ಸೋಮವಾರ ರಾಯಚೂರು ತಾಲೂಕಿನ ಸಗಮಕುಂಟಾ ಗ್ರಾಮದ ವೆಂಕಟೇಶ ಎನ್ನುವ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ರೈಲ್ವೆ ಹಳಿ ಹಾಗೂ ನದಿ ಸೇತುವೆ ಮೇಲೆ ಕುಳಿತು ಹಣ ನೀಡಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ನಡುವೆ ನಾಪತ್ತೆಯಾಗಿರುವ ಕಂಪನಿ ಮಾಲೀಕರು ಹಣ ತಿರುಗಿಸುವುದಾಗಿ ಹೇಳಿಕೆ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದರ್ವೇಶ ಕಂಪನಿಗೆ ಸೇರಿದ ನಾಲ್ವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದ್ದು, ಕಂಪನಿಯಲ್ಲಿ ಹಣ ಹಾಕಿದವರು ದೂರನ್ನು ಸಲ್ಲಿಸಬಹುದು ಎಂದು ಎಸ್ಪಿ ಪುಟ್ಟಮಾದಯ್ಯ ಸಹ ತಿಳಿಸಿದ್ದಾರೆ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜರುಗಿದ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿ ಕುಮಾರ ಈ ವಿಚಾರ ಪ್ರಸ್ತಾಪಿಸಿದ್ದು, ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಪ್ರಕರಣವನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದರು. ಇದೀಗ ನಗರಕ್ಕೆ ಆಗಮಿಸಿರುವ ಸಿಐಡಿ ಅಧಿಕಾರಿಗಳ ತಂಡವು ತನಿಖೆ ಶುರುಮಾಡಿದೆ.