ಚಿಕ್ಕಮಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿಗಳ ವಿರುದ್ಧ ದಸಂಸ ಕಿಡಿ

KannadaprabhaNewsNetwork |  
Published : Jun 11, 2025, 12:27 PM IST
ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ದಸಂಸ ಕಾರ್ಯಕರ್ತರು ಮಂಗಳವಾರ ವಿಧಾನಪರಿಷತ್‌ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಎನ್‌. ರವಿಕುಮಾರ್‌ ವಿರುದ್ಧ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅಂಬೇಡ್ಕರ್ ವಾದಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ವಿಧಾನ ಪರಿಷತ್ ಸದಸ್ಯರನ್ನು ಎತ್ತಿ ಕಟ್ಟುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್‌ ವಿರುದ್ಧ ಆಕ್ರೋಶ । ಕ್ರಮಕ್ಕೆ ಆಗ್ರಹ । ಜಿಲ್ಲಾಡಳಿತಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಂಬೇಡ್ಕರ್ ವಾದಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ವಿಧಾನ ಪರಿಷತ್ ಸದಸ್ಯರನ್ನು ಎತ್ತಿ ಕಟ್ಟುತ್ತಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಸಚಿವ ಪ್ರಿಯಾಂಕ್ ಖರ್ಗೆಯವರ ಜನಪರ ಆಡಳಿತವನ್ನು ಸಹಿಸಿಕೊಳ್ಳದ ರಾಜ್ಯದ ಬಿಜೆಪಿ ಎಂಎಲ್‌ಸಿಗಳಾದ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್.ರವಿಕುಮಾರ್ ಎತ್ತಿಕಟ್ಟುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಹೇಳಿದರು.

ದಲಿತ ವಿರೋಧಿ, ಅಂಬೇಡ್ಕರ್ ಸಮುದಾಯದ ವಂಚಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಜೊತೆಗೆ ಪ್ರಿಯಾಂಕ್ ಖರ್ಗೆ ಹೆಸರಿಗೆ, ವ್ಯಕ್ತಿತ್ವಕ್ಕೆ, ಕುಟುಂಬಕ್ಕೆ ಧಕ್ಕೆ ತಂದಿರುವ ಹಾಗೂ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುತ್ತಿರುವ ರವಿಕುಮಾರ್, ಬಿಜೆಪಿ, ಆರ್‌ಎಸ್‌ಎಸ್ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ದಸಂಸ ಬೃಹತ್ ಪ್ರತಿಭಟನೆ ನಡೆಸುತ್ತಿದೆ ಎಂದರು.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಕಲಬುರಗು ಜಿಲ್ಲಾಧಿಕಾರಿ ನೆರೆ ದೇಶದಿಂದ ಬಂದವರಂತೆ ಕಾಣುತ್ತಾರೆಂದು ಅಗೌರವ, ಸಂವಿಧಾನ ವಿರೋಧಿ ಪದವನ್ನು ಬಳಸಿ, ಜನರ ಹಾಗೂ ಐಎಎಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ಎನ್.ರವಿಕುಮಾರ್ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಉತ್ತಮ ಆಡಳಿತ ನೀಡುತ್ತಿರುವ ಕಲಬುರಗಿ ಜಿಲ್ಲಾಧಿಕಾರಿ ಫೌಜಿಜಾ ತರನುಂ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸುವಂತೆ ಹೈಕೋರ್ಟ್ ತಾಕೀತು ಮಾಡಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಅವರ ನಡವಳಿಕೆ ತರವಲ್ಲ. ಕೂಡಲೇ ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್.ರವಿಕುಮಾರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಯೋಗೀಶ್, ಸತೀಶ್, ಗಿರೀಶ್, ತಾಲೂಕು ಸಂಚಾಲಕ ಪ್ರಸನ್ನ, ಖಜಾಂಚಿ ಸಿದ್ದಪ್ಪ, ಮಹಿಳಾ ಸಂಘಟನಾ ಸಂಚಾಲಕಿ ಸರೋಜ, ಮುಖಂಡರುಗಳಾದ ಚಂದ್ರು, ಉಮೇಶ್, ವಸಂತ್, ರಾಜೇಶ್, ರಘು, ಪವಿತ್ರ, ಪ್ರಮಿಳಾ ಪಾಲ್ಗೊಂಡಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು