ಮೈಸೂರು: ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಬರ್ಬರ ಸಜೀವ ದಹನ ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.
ಜಯಕುಮಾರ್ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸದೆ ಪೊಲೀಸರು ನಿರ್ಲಕ್ಷ್ಯ ಮಾಡಿರುವುದರಿಂದಲೇ ಆತನ ಕೊಲೆಯಾಗಿದೆ. ಹೀಗಾಗಿ, ಈ ಪ್ರಕರಣಕ್ಕೆ ಪೊಲೀಸರೇ ನೇರ ಹೊಣೆ. ನಂತರ ಪತಿಯ ಸಾವಿನ ನೋವಿನಲ್ಲಿದ್ದ ಅನಕ್ಷರಸ್ಥ ಪತ್ನಿಗೆ ತಪ್ಪು ಮಾಹಿತಿ ನೀಡಿ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿ, ನಿಜಾಂಶ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಜಯಕುಮಾರ್ ಕುಟುಂಬಕ್ಕೆ ಆ ಭೂಮಿಯನ್ನು ಸರ್ಕಾರ ಮಂಜೂರು ಮಾಡಬೇಕು. ಹಾಗೂ ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ದಸಂಸ ವಿಭಾಗೀಯ ಸಂಘಟನಾ ಸಂಚಾಲಕ ಬನ್ನಳ್ಳಿ ಸೋಮಣ್ಣ, ಪದಾಧಿಕಾರಿಗಳಾದ ಮಲ್ಲಹಳ್ಳಿ ನಾರಾಯಣ್, ಚಂದ್ರು ಕಳ್ಳಿಮುದ್ದನಹಳ್ಳಿ, ವಾಟಾಳ್ ನಾಗರಾಜು, ಬಸವರಾಜ್ ದೇವಸರನಹಳ್ಳಿ, ಬೊಮ್ಮೇನಹಳ್ಳಿ ಕುಮಾರ್, ಬಲರಾಮ್ ಚಿಬಕಹಳ್ಳಿ, ಅಶೋಕ, ಸಿದ್ಧರಾಜು ಶಂಕರಪುರ ಮೊದಲಾದವರು ಇದ್ದರು.