ಕನ್ನಡಪ್ರಭ ವಾರ್ತೆ ಬೆಂಗಳೂರು ಕೆಂಪೇಗೌಡರ 517ನೇ ಜಯಂತಿಯಂದು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಲೋಕಾರ್ಪಣೆಗೊಂಡಿರುವ 10.7 ಕಿಲೋಮೀಟರ್ ಉದ್ದದ ‘ಎಸ್.ಎಂ. ಕೃಷ್ಣ ರಸ್ತೆ’ ಕೇವಲ ಸಂಚಾರಕ್ಕೆ ಮಾತ್ರವಲ್ಲ, ರಾತ್ರಿ ವೇಳೆಯಲ್ಲಿ ತನ್ನ ಆಕರ್ಷಕ ದೀಪಾಲಂಕಾರದಿಂದಲೂ ಗಮನ ಸೆಳೆಯುತ್ತಿದೆ.ದಸರಾ ಮಾದರಿಯ ದೀಪಾಲಂಕಾರದಿಂದ ‘ಎಸ್.ಎಂ. ಕೃಷ್ಣ ರಸ್ತೆ’ ರಾತ್ರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಯುವಕರು, ಕುಟುಂಬಸ್ಥರು ವಿದ್ಯುತ್ ದೀಪಗಳ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ರಾತ್ರಿ ವೇಳೆ ಆಗಮಿಸುತ್ತಿದ್ದು ಯುವಕರ ನೆಚ್ಚಿನ ಹಾಟ್ ಸ್ಪಾಟ್ ರಸ್ತೆಯಾಗುವುದರ ಜೊತೆಗೆ ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ.
ಬೆಂಗಳೂರು ನಗರದ ಅಭಿವೃದ್ಧಿಯ ಹೊಸ ಹೆಗ್ಗುರುತಾಗಿರುವ ಈ ರಸ್ತೆ ಇದೀಗ ದಸರಾ ಮಾದರಿಯ ಭವ್ಯ ದೀಪಾಲಂಕಾರದಿಂದ ನಗರದ ಜನತೆಯನ್ನು ಆಕರ್ಷಿಸುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಾಣಸಿಗುವ ಬೆಳಕಿನ ವೈಭವವನ್ನು ನೆನಪಿಸುವ ರೀತಿಯಲ್ಲಿ ಈ ರಸ್ತೆಯನ್ನು ಅಲಂಕರಿಸಲಾಗಿದೆ. ವರ್ಣರಂಜಿತ ಅಲಂಕಾರಿಕ ದೀಪಗಳು, ವಿನ್ಯಾಸಬದ್ಧ ಬೆಳಕಿನ ಕಮಾನುಗಳು ಹಾಗೂ ಆಧುನಿಕ ಎಲ್‌ಇಡಿ ಲೈಟಿಂಗ್ ರಸ್ತೆಯ ಎರಡೂ ಬದಿಗಳನ್ನು ಬೆಳಗುವ ಮೂಲಕ ಬೆಂಗಳೂರು ನಗರದ ಸಾಂಸ್ಕೃತಿಕ ವೈಭವ ಮತ್ತು ಆಧುನಿಕ ನಗರಾಭಿವೃದ್ಧಿಯ ಸಮನ್ವಯವನ್ನು ಪ್ರತಿಬಿಂಬಿಸುತ್ತಿದೆ.
ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗಿನ 100ಮೀ ಅಗಲದ (330 ಅಡಿ), 10 ಲೇನ್‌ಗಳ ರಸ್ತೆ ಕಾಮಗಾರಿ ಹೊಣೆಯನ್ನು ಸ್ಟಾರ್ ಇನ್ಫೋಟೆಕ್ ಕಂಪನಿ ವಹಿಸಿಕೊಂಡಿತ್ತು. ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರನ್ನು ಬೆಸೆಯುವ ಈ ರಸ್ತೆ 3 ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ಆಧುನಿಕ ಸರ್ವಿಸ್ ರಸ್ತೆ, ಸೈಕಲ್ ಟ್ರಾಕ್ ವ್ಯವಸ್ಥೆ ಒಳಗೊಂಡಿದೆ. ರಸ್ತೆಯು ಬೆಂಗಳೂರು-ಮೈಸೂರು ಜೋಡಿ ಮಾರ್ಗದ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ಹಾದುಹೋಗಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಕೇವಲ ಮೂರು ತಿಂಗಳಲ್ಲಿ ಕೆಳಸೇತುವೆಯನ್ನು ನಿರ್ಮಿಸಿದ ಸ್ಟಾರ್ ಇನ್ಫೋಟೆಕ್ ಕಂಪನಿಯ ಕಾರ್ಯವೈಖರಿಯನ್ನು ಕಂಡು ರೈಲ್ವೆ ಇಲಾಖೆಯೇ ಅಚ್ಚರಿ ವ್ಯಕ್ತಪಡಿಸಿತು.ಸಾರ್ವಜನಿಕರಿಂದ ಮೆಚ್ಚುಗೆಈ ರಸ್ತೆ ಕಂಬೀಪುರ, ಕೊಮ್ಮಘಟ್ಟ ಹಾಗೂ ಕೆಂಚನಪುರ, ಸೂಲಿಕೆರೆ ಸೇರಿದಂತೆ 11 ಗ್ರಾಮಗಳ ಸಾರ್ವಜನಿಕರು ಸೇರಿದಂತೆ ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಸಾವಿರಾರು ಪ್ರಯಾಣಿಕರು ಬೆಳಕಿನ ವೈಭವಕ್ಕೆ ಮಾರುಹೋಗುತ್ತಿದ್ದಾರೆ. ಉತ್ತಮ ಮೂಲಸೌಕರ್ಯದಿಂದ ಎಸ್.ಎಂ.ಕೃಷ್ಣ ರಸ್ತೆ ಅಭಿವೃದ್ಧಿ ಮತ್ತು ಆಧುನಿಕ ನಗರ ಯೋಜನೆಯ ಪ್ರತೀಕವಾಗಿದೆ. ನಗರದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ನಿರ್ಮಾಣವಲ್ಲ, ನಾಗರಿಕರಿಗೆ ಸುರಕ್ಷಿತ, ಸುಂದರ ಮತ್ತು ಹೆಮ್ಮೆಯ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸುವುದು ಎಂಬುದಕ್ಕೆ ಈ ರಸ್ತೆ ಉದಾಹರಣೆಯಾಗಿದೆ ಎಂದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.