ಬರದ ನಡುವೆಯೂ ಕಳೆಗಟ್ಟಿದ ದಸರಾ ಸಂಭ್ರಮ!

KannadaprabhaNewsNetwork |  
Published : Oct 20, 2026, 01:30 AM IST
ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಭಾನುವಾರ ಜನತೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿ, ಹೂ ಖರೀದಿಸಿದರು. | Kannada Prabha

ಸಾರಾಂಶ

ಬರದ ಛಾಯೆ, ಬೆಲೆ ಏರಿಕೆಯ ಬಿಸಿಯ ನಡುವೆಯೂ ಮಹಾನಗರದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರ ಜನಜಂಗುಳಿ ಕಂಡುಬಂದಿತು.

ಹುಬ್ಬಳ್ಳಿ/ಧಾರವಾಡ:

ಬರದ ಛಾಯೆ, ಬೆಲೆ ಏರಿಕೆಯ ಬಿಸಿಯ ನಡುವೆಯೂ ಮಹಾನಗರದಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರ ಜನಜಂಗುಳಿ ಕಂಡುಬಂದಿದ್ದು, ಹೂವು, ಹಣ್ಣು, ಪೂಜಾ ಸಾಮಗ್ರಿ, ಹೊಸ ಬಟ್ಟೆ ಹಾಗೂ ಸಿಹಿತಿಂಡಿಗಳ ಖರೀದಿ ಭರಾಟೆ ಜೋರಾಗಿತ್ತು.

ಇಲ್ಲಿನ ದುರ್ಗದಬೈಲ್‌, ಜನತಾ ಬಜಾರ್‌, ಹಳೆ ದುರ್ಗದಬೈಲ್‌, ಕೇಶ್ವಾಪುರ ಮುಖ್ಯ ರಸ್ತೆ ಹಾಗೂ ಶಿರೂರು ಪಾರ್ಕ್‌ ರಸ್ತೆ ಹಾಗೂ ಧಾರವಾಡದ ಸುಭಾಸ ರೋಡ್‌, ಸೂಪರ್‌ ಮಾರುಕಟ್ಟೆ, ಗಾಂಧಿ ಚೌಕ್‌ ಸೇರಿದಂತೆ ವಿವಿಧ ಭಾಗಗಳಲ್ಲಿರುವ ಪ್ರಮುಖ ವ್ಯಾಪಾರ ಕೇಂದ್ರಗಳು ಹಬ್ಬದ ಖರೀದಿಯಿಂದ ಕಳೆಗಟ್ಟಿದ್ದವು. ಬೆಳಗ್ಗೆಯಿಂದಲೇ ಜನತೆ ಮಾರುಕಟ್ಟೆಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಹಬ್ಬದ ಪ್ರಯುಕ್ತ ನೀಡಲಾಗುತ್ತಿದ್ದ ವಿಶೇಷ ರಿಯಾಯಿತಿಗಳು ಗ್ರಾಹಕರನ್ನು ಆಕರ್ಷಿಸಿದವು. ಆಭರಣ ಮಳಿಗೆಗಳಲ್ಲಿಯೂ ಖರೀದಿ ಚಟುವಟಿಕೆ ಕಂಡುಬಂತು.

ಹೂವು, ಹಣ್ಣು ದುಬಾರಿ:

ಹಬ್ಬದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಏರಿಕೆಯಾಗಿದೆ. ಕೆಲವು ಹಣ್ಣುಗಳ ಬೆಲೆ ಕೆಜಿಗೆ ₹20ರಿಂದ ₹50ರ ವರೆಗೆ ಹೆಚ್ಚಾಗಿದೆ. ಸೇಬು ಕೆಜಿಗೆ ₹180-200, ಸೀತಾಫಲ ಮತ್ತು ಕಿತ್ತಳೆ ₹120ರಿಂದ ₹150, ಮೋಸಂಬಿ ₹100ರಿಂದ ₹150, ಕಿತ್ತಳೆ ₹250-₹300, ದಾಳಿಂಬೆ ₹120-₹150 ಹಾಗೂ ಬಾಳೆಹಣ್ಣು ಡಜನ್‌ಗೆ ₹40ರಿಂದ ₹80ರ ವರೆಗೆ ಮಾರಾಟವಾದವು. ಏಲಕ್ಕಿ ಬಾಳೆ ಕೆಜಿಗೆ ₹ 100ರಿಂದ ₹120 ಇತ್ತು. ಐದು ಬಗೆಯ ತಲಾ ಒಂದೊಂದು ಹಣ್ಣುಗಳನ್ನು ₹150-₹200ರ ವರೆಗೆ ಮಾರಾಟ ಮಾಡಲಾಗುತ್ತಿತ್ತು.

ಹೂವುಗಳ ಬೆಲೆಯೂ ಸಾಮಾನ್ಯ ದಿನಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಸೇವಂತಿಗೆ ಹೂವಿನ ಮಾರಿಗೆ ₹60ರಿಂದ ₹100, ಚೆಂಡು ಹೂವಿಗೆ ₹60-₹90, ಕಾಕಡ ₹80-₹120, ಮಲ್ಲಿಗೆ ₹100-₹120 ದರವಿತ್ತು. ಡೇರೆ ಹೂವು ಮೂರಕ್ಕೆ ₹50, ಗುಲಾಬಿ ಒಂದಕ್ಕೆ ₹10, ಕಮಲ ಹಾಗೂ ತಾವರೆ ಒಂದಕ್ಕೆ ₹15ರಂತೆ ಮಾರಾಟವಾದವು.

ಪೂಜಾ ಸಾಮಗ್ರಿಗೂ ಬೇಡಿಕೆ:

ಮಾವಿನ ತಳಿರು ಜೋಡಿಗೆ ₹10, ಬಾಳೆಕಂಬ ಜೋಡಿಗೆ ₹80ರಿಂದ ₹100, ಕಬ್ಬಿನ ಜೋಡಿಗೆ ₹80ರಿಂದ ₹120 ಹಾಗೂ ಕುಂಬಳಕಾಯಿಗೆ ₹60ರಿಂದ ₹80 ದರವಿತ್ತು. ಜೋಳದ ದಂಟು, ಬಿಲ್ವಪತ್ರೆ ಮತ್ತು ಬನ್ನಿ ಸೊಪ್ಪು ₹20ಕ್ಕೆ ಮಾರಾಟವಾದವು. ಬೆಲೆ ಹೆಚ್ಚಿದ್ದರೂ ಹಬ್ಬದ ಪೂಜೆಗೆ ಅಗತ್ಯವಿರುವುದರಿಂದ ಜನರು ಚೌಕಾಸಿ ನಡೆಸಿ ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.

ಈ ವರ್ಷ ಮಳೆ ಕೊರತೆಯಿಂದ ಬಿತ್ತಿದ ಬೆಳೆಗಳು ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದು ಹಬ್ಬದ ಸಂಭ್ರಮದ ಮೇಲೂ ನೆರಳು ಬೀರಿದೆ. ಆದರೂ ಸಂಪ್ರದಾಯದಂತೆ ಆಯುಧ ಪೂಜೆ ಹಾಗೂ ದಸರಾ ಆಚರಣೆಗೆ ಜನರು ಸಿದ್ಧತೆ ಮಾಡಿಕೊಂಡಿದ್ದು, ಬರದ ನಡುವೆಯೂ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನು ಜನ ಸೇವಕ, ರಾಜ್ಯ ಸರ್ಕಾರದ ಸಾಧನೆ ಶ್ರೀರಕ್ಷೆ
ಸಂಧಾನ ಯಶಸ್ವಿ: ಶಾಂತವಾದ ಕಬ್ಬಿನ ಕಿಚ್ಚು!