ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ 61ನೇ ದಸರಾ ಉತ್ಸವವನ್ನು ಆಚರಿಸುತ್ತಿರುವ ನಗರದ ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇವಾಲಯದಿಂದ ಈ ಬಾರಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ. ವಿಶೇಷ ರೀತಿಯಲ್ಲಿ ಮಂಟಪ ಹೊರ ತರುತ್ತಿರುವ ಸಮಿತಿ ಸುಮಾರು 20 ಲಕ್ಷ ರು. ವೆಚ್ಚ ಮಾಡುತ್ತಿದೆ. ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಅಧ್ಯಕ್ಷರಾಗಿ ವಿಶಾಕ್ ರಮೇಶ್, ಉಪಾಧ್ಯಕ್ಷರಾಗಿ ಗಣೇಶ್, ದೇವಿ ಪ್ರಸಾದ್ ಅಮೆಮನೆ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂಡದಲ್ಲಿ ಸುಮಾರು 200 ಮಂದಿ ಸದಸ್ಯರಿದ್ದಾರೆ. ಮಂಟಪದ ಕಲಾಕೃತಿಯನ್ನು ಉದ್ಭೂರು ಕ್ರಿಯೇಟಿವ್ ಸ್ಟುಡಿಯೋ ಮಾಡಲಿದ್ದು, ಸುಮಾರು 20ಕ್ಕೂ ಅಧಿಕ ಕಲಾಕೃತಿಗಳನ್ನು ರಚಿಸಲಾಗುತ್ತಿದೆ. ಸೋಮವಾರಪೇಟೆಯ ನಂದಿ ಸೌಂಡ್ಸ್ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸೌಂಡ್ಸ್ ಅನ್ನು ಮಾಡಲಿದೆ. ಕ್ರಿಯೇಟಿವ್ ಸ್ಟುಡಿಯೋ ಹಾಗೂ ಸಿ.ಆರ್. ಬಾಯ್ಸ್ ಚಲನವಲನ ಮಾಡಲಿದ್ದಾರೆ. ಜಯರಾಂ ಆಚಾರ್, ಲಕ್ಷ್ಮಣ ಆಚಾರ್, ಜನ್ನು ಹಾಗೂ ತಂಡ ಫ್ಲಾಟ್ ಫಾರಂ ಸಜ್ಜುಗೊಳಿಸಲಿದೆ. ಮುಧುರೈನ ಶ್ರೀ ಕಾರ್ತಿಕೇಯನ್ ಲೈಟಿಂಗ್ಸ್, ಲೈಟಿಂಗ್ ಬೋರ್ಡ್ ಸಿದ್ಧಪಡಿಸಲಿದ್ದು, ಕ್ರಿಯೇಟಿವ್ ಸ್ಟುಡಿಯೋ ಟ್ಯಾಬ್ಲೋ ವರ್ಕ್ ಮಾಡಲಿದೆ. * ದೇವಾಲಯದ ಇತಿಹಾಸ ಶ್ರೀ ಚೌಡೇಶ್ವರಿ ದೇವಾಲಯ ಮಡಿಕೇರಿ ನಗರದ ಮಾರುಕಟ್ಟೆ ಸಮೀಪವಿದೆ. ಪ್ರಸ್ತುತ ದೇವಾಂಗ ಜನಾಂಗದವರು ಆಡಳಿತ ನಡೆಸುತ್ತಿದ್ದಾರೆ. ಈ ದೇಗುಲವನ್ನು ಕೊಡಗಿನ ರಾಜನಾಗಿದ್ದ ಲಿಂಗರಾಜನು ಶಂಕರಿ ದೇವಾಲಯ ಎಂದು ನಿರ್ಮಿಸಿದನು ಎಂದು ಹೇಳಲಾಗುತ್ತಿದೆ. ಗರ್ಭಗುಡಿಯಲ್ಲಿದ್ದ ಅಮ್ಮನವರ ಮೂಲ ವಿಗ್ರಹವನ್ನು 1966ರಲ್ಲಿ ಬದಲಾಯಿಸಲಾಯಿತ್ತಾದರೂ, ಮೂಲ ವಿಗ್ರಹ ಇಂದಿಗೂ ಭದ್ರವಾಗಿದ್ದು ವಾರ್ಷಿಕ ಉತ್ಸವದಂದು (ದುರ್ಗಾ ಜಯಂತಿ) ಅದೇ ವಿಗ್ರಹವನ್ನು ಪಲ್ಲಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. 1966ರಲ್ಲಿ ಚೌಡೇಶ್ವರಿ ಮಾತೆಯ ವಿಗ್ರಹವಲ್ಲದೆ ಗರ್ಭಗುಡಿಗೆ ಹೊಂದಿಕೊಂಡಂತೆ ಎಡ-ಬಲ ಭಾಗಗಳಲ್ಲಿ ರಾಮ ಮತ್ತು ಸತ್ಯನಾರಾಯಣ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲದೆ ಮಡಿಕೇರಿಯಲ್ಲಿ ಪ್ರಥಮ ಎಂಬಂತೆ ‘ನವಗ್ರಹ’ ವನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಪ್ರತಿವರ್ಷ ದೇವಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವುದರ ಜೊತೆಗೆ ನವರಾತ್ರಿ, ದೀಪಾವಳಿ, ಶಿವರಾತ್ರಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗೌರಿಗಣೇಶ, ಹಬ್ಬಗಳನ್ನು ಆಚರಿಸುವುದರ ಜೊತೆಗೆ ಕಾರ್ತಿಕ ಮಾಸದ ನಿತ್ಯ ಪೂಜೆಗಳು, ಭಕ್ತರೇ ಸೇರಿ ನಡೆಸುವ ರಂಗಪೂಜೆ ವಿಶೇಷವಾಗಿರುತ್ತದೆ. ಈ ಬಾರಿ ಅ.15ರಿಂದ 24ರ ವರೆಗೆ ಚೌಡೇಶ್ವರಿ ದೇವಿಗೆ ಪ್ರತಿ ದಿನ ಕೂಡ ವಿವಿಧ ಬಗೆಯ ಅಲಂಕಾರವನ್ನು ಕೂಡ ಮಾಡಲಾಗುತ್ತದೆ. ಈ ಬಾರಿ ಮಂಟಪವನ್ನು ವಿಶೇಷ ರೀತಿಯಲ್ಲಿ ಹೊರ ತರುತ್ತಿದ್ದು, ಹೆಚ್ಚಿನ ಪೈಪೋಟಿಯನ್ನು ನೀಡುತ್ತೇವೆ. ಇದಕ್ಕಾಗಿ ಹೆಚ್ಚು ವೆಚ್ಚ ಕೂಡ ಮಾಡುತ್ತಿದ್ದೇವೆ. ಮಂಟಪದ ಬಹುತೇಕ ಕೆಲಸವನ್ನು ಸಮಿತಿಯ ಸದಸ್ಯರೇ ಮಾಡುತ್ತಿದ್ದಾರೆ. ದೇವಾಲಯದಲ್ಲಿ ಒಂಬತ್ತು ದಿನ ಕೂಡ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. । ವಿಶಾಕ್ ರಮೇಶ್, ಅಧ್ಯಕ್ಷರು ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ