ಪೊಲೀಸ್‌ ಇಲಾಖೆಯಿಂದ ಡೇಟಾಥಾನ್‌: 5 ತಂಡಗಳು ವಿಜೇತ

KannadaprabhaNewsNetwork | Published : Jun 23, 2024 2:07 AM

ಸಾರಾಂಶ

ಪೊಲೀಸ್‌ ಇಲಾಖೆಯು ದತ್ತಾಂಶದ ಗೌಪ್ಯತೆ ಹಾಗೂ ಅಪಘಾತ ದತ್ತಾಂಶ ವಿಶ್ಲೇಷಣೆ ಸೇರಿ ಐದು ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡೇಟಾಥಾನ್‌ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಪೊಲೀಸ್‌ ಇಲಾಖೆ, ಮೈಕ್ರೋಸಾಫ್ಟ್‌ ಸಂಸ್ಥೆ ಹಾಗೂ ಹ್ಯಾಕ್‌ 2 ಸ್ಕಿಲ್‌ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೇಟಾಥಾನ್‌ ಕಾರ್ಯಕ್ರಮದಲ್ಲಿ ಐದು ವಿಜೇತ ತಂಡಗಳಿಗೆ ತಲಾ ₹1 ಲಕ್ಷ ಬಹುಮಾನ ನೀಡಲಾಯಿತು.

ನಗರದ ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 15 ತಂಡಗಳು ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರದ ಪ್ರಾತ್ಯಕ್ಷಿಗೆ ನೀಡಿದವು. ಐದು ವಿಭಾಗಗಳಲ್ಲಿ ತಲಾ ಒಂದು ತಂಡಗಳನ್ನು ವಿಜೇತರನ್ನಾಗಿ ಘೋಷಿಸಿ ಬಹುಮಾನ ನೀಡಲಾಯಿತು.

ರಾಜ್ಯ ಪೊಲೀಸ್‌ ಇಲಾಖೆಯು ಅಪರಾಧ ನಿಯಂತ್ರಣ, ಸಂಚಾರ ದಟ್ಟಣೆ ನಿರ್ವಹಣೆ, ಪೊಲೀಸ್‌ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ನಿರ್ವಹಣೆ, ಕಾನೂನು ಜಾರಿಯಲ್ಲಿ ದತ್ತಾಂಶದ ಗೌಪ್ಯತೆ ಹಾಗೂ ಅಪಘಾತ ದತ್ತಾಂಶ ವಿಶ್ಲೇಷಣೆ ಸೇರಿ ಐದು ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡೇಟಾಥಾನ್‌ ಆಯೋಜಿಸಿತ್ತು.

11 ಸಾವಿರ ನೋಂದಣಿ:

ಈ ಡೇಟಾಥಾನ್‌ನಲ್ಲಿ ದೇಶದ ವಿವಿಧ ಭಾಗಗಳ ವೃತ್ತಿಪರ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಸ್ಟಾರ್ಟ್‌ಅಪ್‌ಗಳು, ಕಾಲೇಜು ವಿದ್ಯಾರ್ಥಿಗಳು ಸೇರಿ 11 ಸಾವಿರಕ್ಕೂ ಅಧಿಕ ನೋಂದಣಿಗಳು ಬಂದಿದ್ದವು. ಇದರಲ್ಲಿ ಗಮರ್ನಾರ್ಹ 890 ಪರಿಕಲ್ಪನೆಗಳನ್ನು ಪರಿಶೀಲಿಸಿ ಪ್ರತಿ ಸಮಸ್ಯೆಗೆ 30 ತಂಡಗಳಂತೆ ಒಟ್ಟು 150 ತಂಡಗಳನ್ನು ತಂತ್ರಜ್ಞಾನ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಅತ್ಯುತ್ತಮ ಪರಿಹಾರ ಅಭಿವೃದ್ಧಿಪಡಿಸಿದ್ದ 15 ತಂಡಗಳನ್ನು ಆಯ್ಕೆ ಮಾಡಿ, ಪ್ರತಿ ವಿಭಾಗದಲ್ಲಿ ಒಂದು ತಂಡದಂತೆ ಐದು ತಂಡಗಳನ್ನು ವಿಜೇತರನ್ನಾಗಿ ಘೋಷಿಸಲಾಗಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್‌ ಗಣಕ ವಿಭಾಗದ ಎಡಿಜಿಪಿ ಪ್ರಣವ್‌ ಮೊಹಂತಿ, ಐಐಐಟಿ ನಿರ್ದೇಶಕ ಪ್ರೊ.ದೇಬ್ರತಾ ದಾಸ್‌, ಮೈಕ್ರೋಸಾಫ್ಟ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಸೆ, ಸೇಲ್ಸ್‌ ವಿಭಾಗದ ನಿರ್ದೇಶಕ ತೇಜಸ್ವಿ ಕುಮಾರ್‌, ಹ್ಯಾಕ್‌ 2 ಸ್ಕಿಲ್‌ ಸಂಸ್ಥೆಯ ಸಿಇಒ ಸಮ್ಮಿತ್‌ ಶರ್ಮಾ, ಎಸ್‌ಸಿಆರ್‌ಬಿ ಎಸ್ಪಿ ಲಕ್ಷ್ಮಣ್‌ ನಂಬರಗಿ ಇದ್ದರು.

ವಿಜೇತ ತಂಡಗಳ ಮಾಹಿತಿ

ಅಪರಾಧ ನಿಯಂತ್ರಣ ವಿಭಾಗ-ಚೆನ್ನೈನ ಈಶ್ವರಿ ಎಂಜಿನಿಯರಿಂಗ್‌ ಕಾಲೇಜಿನ ಸೈರನ್‌ ಸ್ಕ್ವಾಡ್‌ ತಂಡ, ಸಂಚಾರ ದಟ್ಟಣೆ ನಿರ್ವಹಣೆ ವಿಭಾಗ-ಚೆನ್ನೈನ ಸೇಂಟ್‌ ಜೋಸೆಫ್‌ ಕಾಲೇಜ್‌ ಆಫ್‌ ಎಂಜಿನಿರಿಂಗ್‌ನ ಕೋಡ್‌ ಒನ್‌ ತಂಡ, ಪೊಲೀಸ್ ಕಾರ್ಯಕ್ಷಮತೆ ಮತ್ತು ಸಂಪನ್ಮೂಲ ನಿರ್ವಹಣೆ ವಿಭಾಗ- ಮುಂಬೈ ಲುಮಿನಾ ಪಿಲೈ ಕಾಲೇಜ್ ಆಫ್‌ ಎಂಜಿನಿಯರಿಂಗ್‌, ಡೇಟಾ ಗೌಪ್ಯತೆ ವಿಭಾಗ- ಗಾಜಿಯಾಬಾದ್‌ನ ಶೆರಲಾಕ್‌ ಅಜಯ್‌ ಕುಮಾರ್‌ ಗರ್ಗ್‌ ಎಂಜಿನಿಯರಿಂಗ್‌ ಕಾಲೇಜು ಮತ್ತು ಜಿ.ಎಲ್‌.ಬಜಾಜ್‌ ಇನ್ಸ್‌ಟ್ಯೂಟ್‌ ಆಫ್‌ ಟೆಕ್ನಾಲಜಿ, ಅಪಘಾತ ದತ್ತಾಂಶ ವಿಶ್ಲೇಷಣೆ ವಿಭಾಗ- ನಾಗಪುರದ ಚೈರಾಸ್ತಾ ಯಶವಂತ್‌ ರಾವ್‌ ಚೈವಾಲ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌.

Share this article