- ದತ್ತಪೀಠ ಸೇವಾ ಸಮಿತಿ ನೇತೃತ್ವ, ಕಾರ್ತಿಕ ಮಾಸದ ಪೂಜೆ, ನ. 2 ರಂದು ದತ್ತಪೀಠಕ್ಕೆ ಭಕ್ತರ ಆಗಮನ
ಈ ಬಾರಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ಜತೆ ಸೇರಿ ಶ್ರೀರಾಮ ಸೇನೆ ಡಿಸೆಂಬರ್‌ನಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಹಿನ್ನಲೆಯಲ್ಲಿ ದತ್ತಪೀಠ ಸೇವಾ ಸಮಿತಿಯ ಬ್ಯಾನರ್ ನಡಿ ಇದೇ ಮೊದಲ ಬಾರಿಗೆ ದತ್ತಮಾಲಾ ಅಭಿಯಾನ ನಡೆಸಲಾಗುತ್ತಿದೆ.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನಡೆಸಿದ ದತ್ತಪೀಠ ಹೋರಾಟದ ಮೇಲೆ ರಾಜಕೀಯದ ನೆರಳು ಬಿದ್ದ ಪರಿಣಾಮ ಪ್ರಮೋದ್ ಮುತಾಲಿಕ್ ಶ್ರೀರಾಮ ಸೇನೆ ಸಂಘಟನೆ ಹುಟ್ಟು ಹಾಕಿದರು. ಅದರಡಿ 20 ವರ್ಷಗಳ ಕಾಲ ಕಾರ್ತಿಕ ಮಾಸದಲ್ಲಿ ದತ್ತಮಾಲಾ ಅಭಿಯಾನ ನಡೆಸಿಕೊಂಡು ಬರಲಾಗುತ್ತಿತ್ತು.ಕಳೆದ ವರ್ಷ ಶ್ರೀರಾಮ ಸೇನೆ ದತ್ತಮಾಲೆ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ವಿಶ್ವಹಿಂದೂ ಪರಿಷತ್, ಭಜರಂಗದಳ ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಈ ಹೋರಾಟವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಹಿಂದೂ ಸಂಘಟನೆಗಳು ಒಂದಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ನಗರದ ಶ್ರೀ ಶಂಕರಮಠದಲ್ಲಿ ಗುರುವಾರ ದತ್ತಭಕ್ತರು ದತ್ತಮಾಲೆ ಧರಿಸಿದರು. ಅ. 31 ರಂದು ದತ್ತ ದೀಪೋತ್ಸವ ನಡೆಯಲಿದ್ದು, ನ. 1 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾಧಾರಿಗಳನ್ನು ಪಡಿ ಸಂಗ್ರಹಿಸಲಿದ್ದಾರೆ. ನ. 2 ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ.
ಕಳೆದ 20 ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ದತ್ತಮಾಲೆ ಧರಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ಶ್ರೀರಾಮ ಸೇನೆ ಈ ಕಾರ್ಯಕ್ರಮ ಕೈ ಬಿಟ್ಟಿದೆ. ಹಾಗಾಗಿ ದತ್ತಪೀಠ ಸೇವಾ ಸಮಿತಿ ನೇತೃತ್ವದಲ್ಲಿ ಈ ಬಾರಿ ದತ್ತಮಾಲಾ ಅಭಿಯಾನ ಆಯೋಜನೆ ಮಾಡಲಾಗಿದೆ. ಇದನ್ನು ಹೀಗೆಯೇ ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗಲಾಗುವುದು.- ರಂಜಿತ್ ಶೆಟ್ಟಿ
ಸಂಚಿಗೆ ಬಲಿಯಾಗದಂತೆ ಎಲ್ಲಾ ಹಿಂದೂಗಳನ್ನು ಸಂಘಟಿಸುವ ಚಿಂತನೆ ಒಳ್ಳೆಯದು. ಹಿಂದೂ ಸಮಾಜ ದೊಳಗೆ ಇರುವ ಅಸ್ಪೃಶ್ಯತೆ, ಜಾತಿಯತೆ ಭಾವನೆ ದೂರ ಮಾಡುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಆಗ ಬೇಕು. ಸಕಲ ಮಠಾಧಿಪತಿಗಳು ಮುಂದಾಗಿ ಜಾತಿಯತೆ ಮತ್ತು ಅಸ್ಪೃಶ್ಯತೆಗೆ ಸಮಾಜದಲ್ಲಿ ಜಾಗ ಇಲ್ಲದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. - ಸಿ.ಟಿ. ರವಿ
30 ಕೆಸಿಕೆಎಂ 4ಚಿಕ್ಕಮಗಳೂರಿನ ಶ್ರೀ ಶಂಕರಮಠದಲ್ಲಿ ಗುರುವಾರ ದತ್ತಭಕ್ತರು ದತ್ತಮಾಲೆ ಧರಿಸಿದರು.