ರಾಣಿಬೆನ್ನೂರು:
ಗುತ್ತಲ: ನಿತ್ಯವೂ ಅಚ್ಚ ಕನ್ನಡದಲ್ಲಿಯೇ ಪೂಜೆ ಜರುಗುವ ರಾಜ್ಯದ ಏಕೈಕ ಹಾಗೂ ಐತಿಹಾಸಿಕ ಪರಂಪರೆಯ ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾ ಮಠದ ಕಳಾಸರೋಹಣ, ಲೋಕಾರ್ಪಣೆ ಹಾಗೂ ಧರ್ಮಜಾಗೃತಿ ಸಮಾರಂಭವು ಏ. 14ರಿಂದ 16ರ ವರೆಗೆ ಜರುಗಲಿದೆ.ಏ.14ರ ಸಂಜೆ 6.30ಕ್ಕೆ ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಂಡರಗಿಯ ಡಾ. ಅನ್ನದಾನೇಶ್ವರ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮಿಜಿ ವಹಿಸುವರು. ಹಾವೇರಿಯ ಸದಾಶಿವ ಸ್ವಾಮೀಜಿ ಉಪದೇಶ ನೀಡುವರು. ನೆಗಳೂರಿನ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಗುತ್ತಲದ ಗುರುಸಿದ್ದ ಸ್ವಾಮೀಜಿ ಸಮ್ಮುಖ ವಹಿಸುವರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಾಳವ್ವ ಗೊವರವ ಅತಿಥಿಗಳಾಗಿ ಆಗಮಿಸುವರು.ಏ. 15ರ ಸಂಜೆ 4ಕ್ಕೆ ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾರೋಟು ಉತ್ಸವವು ವಿವಿಧ ವಾದ್ಯಗಳೊಂದಿಗೆ ಪೂರ್ಣಕುಂಭಗಳ ಮೆರವಣಿಗೆ ಗುತ್ತಲದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೇಮಗಿರಿಮಠಕ್ಕೆ ಆಗಮಿಸುವುದು. ನಂತರ ಧರ್ಮಸಭೆಯ ಸಾನ್ನಿಧ್ಯವನ್ನು ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನೆಗಳೂರಿನ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಆಗಮಿಸುವರು.ಏ. 16ರ ಬೆಳಗ್ಗೆ 7ಕ್ಕೆ ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರಿಂದ ಹೇಮಗಿರಿಮಠದಲ್ಲಿ ವೈಭವಯುಕ್ತ ಇಷ್ಟಲಿಂಗ ಮಹಾಪೂಜೆ ನೆರವೇರುವುದು. ನಂತರ ಧರ್ಮ ಸಂದೇಶ, ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾಮಠದ ಉದ್ಘಾಟನೆ, ನೂತನ ಗೋಪುರಗಳ ಕಳಸಾರೋಹಣ ನೆರವೇರುವುದೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.