ನಾಗರಾಜ ಎಸ್.ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆಮಧ್ಯ ಕರ್ನಾಟಕದ ಜಿಲ್ಲೆಯ ಆಶೋತ್ತರಕ್ಕೆ ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ನೆಚ್ಚಿನ ಎಮ್ಮೆ ಕೋಣ ಈಯ್ತು ಎಂಬಂತಾಗಿರುವುದು ಸ್ಪಷ್ಟ. 15ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್, ಐಟಿ ಬಿಟಿ ಪಾರ್ಕ್, ಏತ ನೀರಾವರಿ ಯೋಜನೆ, ಹೊಸ ಕಾರ್ಯಕ್ರಮ ಏನಾದರೂ ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಕಡೆಗೂ ನಿರಾಸೆ ಉಂಟು ಮಾಡಿತು.
ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ, ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ಸೇರಿ 7 ಜಿಲ್ಲೆಗಳಲ್ಲಿ ₹187 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗುತ್ತದೆ. ಇದಕ್ಕೆ ದಾವಣಗೆರೆಗೆ ಎಷ್ಟು ಅನುದಾನ ಎಂಬುದು ಸ್ಪಷ್ಟವಾಗಿಲ್ಲ. ದಾವಣಗೆರೆ ತಾಲೂಕು ದೊಡ್ಡಬಾತಿ ಗ್ರಾಮದ ಬಳಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ಯಂತ್ರ ಖರೀದಿಗೆ ಒಟ್ಟಾರೆ ₹10 ಕೋಟಿ ಅನುದಾನ ಮೀಸಲಿಟ್ಟಿದ್ದು, ಅದರಲ್ಲಿ ಒಂದಿಷ್ಟು ಅನುದಾನ ಸಿಗುವ ಸಾಧ್ಯತೆ ಇದೆ.ಹೊನ್ನಾಳಿ, ಚನ್ನಗಿರಿ ತಾಲೂಕಿನ ಕೆರೆಗಳನ್ನು ತುಂಬಿಸುವ, ಇಂದಿಗೂ ಅಪೂರ್ಣವಾಗಿರುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ಕೇಂದ್ರದ 5,300 ಕೋಟಿ ರು. ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯಿಸುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಮೇಲ್ದಂಡೆಯಡಿ ಜಗಳೂರು ತಾಲೂಕಿನ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಹಾಗಾಗಿ ರಾಜ್ಯ ಬಜೆಟ್‌ನಲ್ಲಿ ಅನುದಾನ ಇಲ್ಲವಾದರೂ, ಕೇಂದ್ರಕ್ಕೆ ಒತ್ತಾಯಿಸಿದ್ದಷ್ಟೇ ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ನಲ್ಲಿ ಕೇಳಿ ಬಂದ ಭರವಸೆಯಾಗಿದೆ.
ಮತ್ತೆ ಆಸೆಗಳ ಮೂಟೆ ಭಾರ ಮುಂದಿನ ಬಜೆಟ್ಗೆದಶಕಗಳ ಕನಸಾದ ವಿಮಾನ ನಿಲ್ದಾಣ, ಮೆಕ್ಕೆಜೋಳ ಸೇರಿ ಕೃಷಿ ಸಂಸ್ಕರಣಾ ಘಟಕ, ಕೃಷಿ ಉತ್ಪನ್ನ ಆದಾರಿತ ಕೈಗಾರಿಕೆ, ಏತ ನೀರಾವರಿ ಯೋಜನೆಗಳು, ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ, ಸರ್ಕಾರಿ ವೈದ್ಯಕೀಯ, ತೋಟಗಾರಿಕೆ-ಕೃಷಿ ಕಾಲೇಜು, ಪ್ರಮುಖ ಐತಿಹಾಸಿಕ, ಪ್ರವಾಸಿ ತಾಣಗಳ ಅಭಿವೃದ್ಧಿ, ದುಡಿಯುವ ಕೈಗೆ ಸ್ಥಳೀಯವಾಗಿ ಉದ್ಯೋಗ, ಪ್ರತಿಭಾ ಪಲಾಯನ ತಡೆಗೆ ಐಟಿ ಪಾರ್ಕಿಗೆ ಶಕ್ತಿ ತುಂಬುವ ಯತ್ನ, ಜಾಗ ಪಡೆಯಲಿಕ್ಕಷ್ಟೇ ಸೀಮಿತವಾಗಿ ಉಳಿದಿರುವ ಜವಳಿ ಪಾರ್ಕಿಗೆ ಕಾಯಕಲ್ಪ, ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಹೀಗೆ ಹಲವು ನಿರೀಕ್ಷೆಗಳು ಸಿದ್ದರಾಮಯ್ಯನವರ 15ನೇ ಬಜೆಟ್ ನಲ್ಲೂ ಹುಸಿಯಾಗಿವೆ. ಶಿಕ್ಷಣ, ವಾಣಿಜ್ಯ, ಕೃಷಿ ಹೀಗೆ ನಾನಾ ರೀತಿ ರಾಜ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಜಿಲ್ಲೆಯ ಬಗ್ಗೆ ಆಳುವ ಸರ್ಕಾರಗಳ ನಿರ್ಲಕ್ಷ್ಯ ಮತ್ತೆ ಮುಂದುವರಿದಿದೆ. ಕಳೆದ 4-5 ಬಜೆಟ್ ನಲ್ಲಿ ದಾವಣಗೆರೆಗೆ ಖಾಲಿ ಬಾಗಿನ ಕೊಟ್ಟಿದ್ದರು. ಪ್ರವಾಸೋದ್ಯಮ ನಕ್ಷೆಯಲ್ಲಿ ದಾವಣಗೆರೆ ಕಕ್ಷೆ ಇಲ್ಲದಂತಾಗಿದೆ.
ಸಿದ್ದರಾಮಯ್ಯ-75ರ ಖುಷಿಗೂ ಏನೂ ಕೊಟ್ಟಿಲ್ಲವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ನಡೆದ ಸಿದ್ದರಾಮಯ್ಯ -75 ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಉತ್ಸಾಹ ನೂರ್ಮಡಿಗೊಳಿಸಿತ್ತು. ಪಕ್ಷಕ್ಕಷ್ಟೇ ಅಲ್ಲ, ಸ್ವತಃ ಸಿಎಂ ಸಿದ್ದರಾಮಯ್ಯನವರಿಗೂ ಬಲ ತಂದ ಐತಿಹಾಸಿಕ ಕಾರ್ಯಕ್ರಮಕ್ಕೆ ಕಾರಣವಾದ ಈ ಜಿಲ್ಲೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಯಾವುದೇ ಘೋಷಣೆ, ಕಾರ್ಯಕ್ರಮ ನೀಡಿಲ್ಲ. ಹೊಸದೇನನ್ನೂ ಪ್ರಕಟಿಸಿಲ್ಲ. ಸಿದ್ದರಾಮಯ್ಯ ಕೂಡ ಹಿಂದಿನವರಂತೆ ಮಧ್ಯ ಕರ್ನಾಟಕದ ಜನರ ನಿರಾಸೆಗೆ ಕಾರಣರಾಗಿದ್ದಾರೆ.
ದಾವಣಗೆರೆ ಜಿಲ್ಲೆಗೆ ಸಿಕ್ಕಿದ್ದೇನು?* ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ
* ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅತ್ಯಾಧುನಿಕ ಯಂತ್ರ ಖರೀದಿಗೆ ₹10ಕೋಟಿ ಅನುದಾನ* ಹೊನ್ನಾಳಿ, ಚನ್ನಗಿರಿ ತಾಲೂಕಿನ ಕೆರೆಗಳ ಭರ್ತಿ
* ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಭರವಸೆ