-ಬಿ.ವಾಮದೇವಪ್ಪ ಅಭಿಮತ । ಬೆಣ್ಣೆನಗರಿ ಸಾಹಿತ್ಯ ಪ್ರಶಸ್ತಿ ಪ್ರದಾನ । ಬಿಎಂಜಿ ವೀರೇಶ್ರ "ಗುಬ್ಬಿ ಹೂ " ಕವನ ಸಂಕಲನ ಲೋಕಾರ್ಪಣೆ
ಮೊದಲು ದಾವಣಗೆರೆ ವಾಣಿಜ್ಯ ನಗರಿ, ಶೈಕ್ಷಣಿಕ ನಗರಿಯಾಗಿತ್ತು. ಅದರಂತೆ ಇದು ಶಿಕ್ಷಣ ಕಾಶಿ ಎನ್ನುವ ಹೆಸರನ್ನು ಪಡೆದುಕೊಳ್ಳಲು ಅತ್ಯಂತ ಸೂಕ್ತವಾದ ಮಧ್ಯ ಕರ್ನಾಟಕದ ನಗರ ದಾವಣಗೆರೆಯಾಗಿದೆ. ಈಗ ಅದು ಸಾಹಿತ್ಯ ನಗರಿಯಾಗಿ ಹೆಸರನ್ನು ಪಡೆಯುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಬೆಣ್ಣೆ ನಗರಿ ಸಾಹಿತ್ಯ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಬೆಣ್ಣೆನಗರಿ ಸಾಹಿತ್ಯ ಪ್ರಶಸ್ತಿ ಪ್ರದಾನ, ಬಿಎಂಜಿ ವೀರೇಶ್ ಅವರ ಗುಬ್ಬಿ ಹೂ ಕವನ ಸಂಕಲನ ಲೋಕಾರ್ಪಣೆ, ದಸರಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು 1997 ರಲ್ಲಿ ದಾವಣಗೆರೆಯನ್ನು ಜಿಲ್ಲೆ ಮಾಡಿದಾಗ ಇದರ ಜೊತೆಗೆ ಏಳು ಜಿಲ್ಲೆಗಳು ಉದಯವಾದವು. ಈ ಏಳು ಜಿಲ್ಲೆಗಳ ಪೈಕಿ ಎಲ್ಲಾ ರೀತಿಯ ಅಭಿವೃದ್ಧಿಗಳಲ್ಲಿ ಅತೀ ಮುಂಚೂಣಿಯಲ್ಲಿರುವ ಜಿಲ್ಲೆ ಎಂದರೆ ಅದು ದಾವಣಗೆರೆ ಎಂದು ಅಭಿಮಾನದಿಂದ ಹೇಳಲು ಇಷ್ಟಪಡುತ್ತೇನೆ ಎಂದರು.
ದಾವಣಗೆರೆ ಇಂದು ತನ್ನದೇ ಆದಂತಹ ಆರ್ಥಿಕ ಸಬಲತೆ, ಸಾಹಿತ್ಯಿಕ ಸಬಲತೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಬಲತೆಯನ್ನು ಪಡೆದಿದೆ. ಇತ್ತೀಚೆಗೆ ನಡೆದ ದಸರಾ ಕವಿಗೋಷ್ಠಿಯಲ್ಲಿ ದಾವಣಗೆರೆಯಿಂದ 6 ಜನ ಕವಿಗಳು ಭಾಗವಹಿಸಿದ್ದರು. ಜೊತೆಗೆ ಎರಡು ಸಾಂಸ್ಕೃತಿಕ ತಂಡಗಳು ಸಹಾ ಭಾಗವಹಿಸಿದ್ದು, ದಾವಣಗೆರೆ ಎಲ್ಲದರಲ್ಲೂ ಮುಂಚೂಣಿಗೆ ಬರುತ್ತಿದೆ ಎಂದರು.
ಬೆಂಗಳೂರಿನ ಕಥೆಗಾರ್ತಿ, ಪತ್ರಕರ್ತೆ ಭಾರತಿ ಹೆಗಡೆ ಮಾತನಾಡಿ, ಒಂದು ಕಥೆ ಕಟ್ಟುವುದು ಸುಲಭವಲ್ಲ, ಕಥೆ ಕಟ್ಟಲು, ಕಾದಂಬರಿ ಬರೆಯಲು ಶಕ್ತಿಬೇಕು, ಮೊದಲಿಗೆ ಮಾನಸಿಕವಾದ ಸಿದ್ಧತೆ ಬೇಕು. ಕಥೆ ಹೇಳಿದಷ್ಟು, ಕೇಳಿದಷ್ಟು ಬರೆಯುವುದು ಸುಲಭವಲ್ಲ. ಇತ್ತೀಚೆಗೆ ಸುಲಭ ಏಕೆ ಆಗುತ್ತಿದೆ ಎಂದರೆ ಸ್ಪರ್ಧೆಗಳು, ವೇದಿಕೆಗಳು ಜಾಸ್ತಿಯಾಗುತ್ತಿವೆ. ಕಥೆಗಳನ್ನು ಬರೆಯುವಾಗ ಎಷ್ಟು ಸವಾಲುಗಳಿರುತ್ತವೆಯೋ ಹಾಗೆ ಅವುಗಳಿಗೆ ಆಯ್ಕೆ ತೀರ್ಪು ಕೊಡುವುದು ಅಷ್ಟೇ ಸವಾಲಾಗಿರುತ್ತದೆ.
ಬೆಂಗಳೂರಿನ ಜಯರಾಮಚಾರಿ ಅವರ ಅಂಗಳದಲ್ಲಿ ಬಿದ್ದ ನಕ್ಷತ್ರದ ತುಂಡುಗಳು ಕಥಾ ಸಂಕಲನಕ್ಕೆ ಬೆಣ್ಣೆ ನಗರಿ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಾಹಿತಿ ಸಂಧ್ಯಾ ಸುರೇಶ ಕವನ ಸಂಕಲನ ಕುರಿತು ಮಾತನಾಡಿದರು. ಸಂಘದ ಸಂಚಾಲಕ ಸುನಿತಾ ಪ್ರಕಾಶ್, ಉಮೇಶ ತಾಳಿಕಟ್ಟೆ, ಅಣಬೇರು ತಾರೇಶ್, ಕೆ.ಮೋಹನ, ಶೋಭಾ ಮಂಜುನಾಥ, ನೂರ್ ಜಹಾನ್ ಬೇಗಂ, ಸೇರಿದಂತೆ ಸಂಘದ ಸದಸ್ಯರು ಇದ್ದರು.
.......
ದಾವಣಗೆರೆಯಲ್ಲಿಂದು ಬೆಣ್ಣೆನಗರಿ ಸಾಹಿತ್ಯ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಯರಾಮಚಾರಿಗೆ ಬೆಣ್ಣೆನಗರಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಡಾ.ಅಮರೇಶ ನುಗಡೋಣಿ, ಭಾರತಿ ಹೆಗಡೆ, ಬಿಎಂಜಿ ವೀರೇಶ ಇದ್ದರು.