ಅಂಗನವಾಡಿ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

KannadaprabhaNewsNetwork |  
Published : Dec 18, 2024, 12:47 AM IST
17ಎಚ್‌ಪಿಟಿ2- ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಅಂಗನವಾಡಿ ನೌಕರರು ಅಹೋರಾತ್ರಿ ಧರಣಿ ನಡೆಸಿದರು. | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ (ಸಿಐಟಿಯು ಸಂಯೋಜಿತ) ಹೊಸಪೇಟೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಲಾಯಿತು.

ಹೊಸಪೇಟೆ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರನ್ನು ಕಾಯಂಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ (ಸಿಐಟಿಯು ಸಂಯೋಜಿತ) ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಇದನ್ನು ಎಲ್ಲರಿಗೂ ಅನ್ವಯಿಸಬೇಕು. 2018ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ₹25 ಸಾವಿರಗಳಿಗೆ ಗೌರವಧನ ಹೆಚ್ಚಿಸಬೇಕು. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ ₹15 ಸಾವಿರಗಳಿಗೆ ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡುಗಂಟು ಅಥವಾ ಎನ್‌ಪಿಎಸ್ ಹಣವನ್ನು ಹಾಗೂ ₹10 ಸಾವಿರ ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಇಲಾಖೆ ಮತ್ತು ಎಸ್‌ಎಂಸಿಗಳಿಂದ ಪ್ರಾರಂಭ ಮಾಡಿರುವ ಎಲ್‌ಕೆಜಿ-ಯುಕೆಜಿ ನಿಲ್ಲಿಸಿ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಬೇಕು. ಐಸಿಡಿಎಸ್ ಯೋಜನೆಗಾಗಿಯೇ ಪ್ರತ್ಯೇಕ ನಿರ್ದೇಶನಾಲಯ ತೆರೆಯಬೇಕು. ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭಾ ಚುನಾವಣೆಗಳು ಅಲ್ಲದೇ ಉಪಚುನಾವಣೆಗಳಲ್ಲಿ ಮತದಾರರನ್ನು ಗುರುತಿಸುವುದು, ಅನರ್ಹಗೊಳಿಸುವುದು, ಚುನಾವಣಾ ಸಂದರ್ಭದಲ್ಲಿ ಚೀಟಿ ಹಂಚುವುದು, ಬೂತ್‌ಗಳಲ್ಲಿ ಕೆಲಸ ಮಾಡುವುದು ಮುಂತಾದ ಕೆಲಸಗಳಿಂದ ಅಂಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳಲ್ಲಿ ಅಂಗನವಾಡಿ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸಬೇಕು. ಇಲಾಖೆ ಸಚಿವರು ಒಪ್ಪಿಕೊಂಡಂತೆ ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಆಹಾರಕ್ಕೆ ಜಿಎಸ್‌ಟಿ ವಿಧಿಸಬಾರದು. ಘಟಕ ವೆಚ್ಚ ಹೆಚ್ಚಳ ಮಾಡಿ ಹಿಂದಿನಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೆನು ಅಂತಿಮಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ ಮೂರು ತಿಂಗಳೊಳಗೆ ನೇಮಕಾತಿಯಾಗಬೇಕು. ಇಲ್ಲದಿದ್ದರೆ ಅಧಿಕಾವಧಿ ವೇತನ ಕೊಡಬೇಕು. ಸಹಾಯಕಿ ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಟೇಕ್ ಹೋಮ್ ಕೊಡಬೇಕು. ಇಲ್ಲದಿದ್ದರೆ ತಾತ್ಕಾಲಿಕ ಸಹಾಯಕಿಯನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಕಾರ್ಯಕರ್ತೆಗೆ ಕೊಡಬೇಕು. ಖಾಲಿ ಇರುವ ಮತ್ತು ಹೊಸ ಕೇಂದ್ರಗಳಿಗೆ ಸರ್ಕಾರಿ ಆದೇಶದಂತೆ ಮುಂಬಡ್ತಿ, ವರ್ಗಾವಣೆಗಳನ್ನೂ ನೀಡಿ ನಂತರ ಹೊಸ ಆಯ್ಕೆ ಮಾಡಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಅವಕಾಶದಿಂದ ವಂಚಿಸಬಾರದು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಸುವ ತನಕ ಸಹಾಯಕಿಯನ್ನು ಕೊಡಬೇಕು ಮತ್ತು ಪೂರ್ಣ ಕಾರ್ಯಕರ್ತೆಗೆ ಕೊಡುವಷ್ಟು ಗೌರವಧನ ಹೆಚ್ಚಿಸಬೇಕು. ಪೌಷ್ಟಿಕ ಆಹಾರ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಹಕ್ಕಾಗಬೇಕು. ಐಸಿಡಿಎಸ್ ಯೋಜನೆಯನ್ನು ಕಾಯ್ದೆಯಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಆರ್.ಎಸ್. ಬಸವರಾಜ, ಕೆ. ನಾಗರತ್ನಾ, ಶಕುಂತಲಾ, ಜಲಜಾಕ್ಷಿ, ಮಾರೆಕ್ಕ, ಗೀತಾ, ಗಿರಿಜಮ್ಮ, ಸೌಭಾಗ್ಯಮ್ಮ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ. ನಾಗರಾಜ, ರೇವಣಸಿದ್ದಪ್ಪ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ