ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ಫೈನಲ್‌ನಲ್ಲಿ ಎಸ್.ಕೆ.ದಯಾ ಫ್ರೆಂಡ್ಸ್ ಕ್ಲಬ್‌ನ ಆಟಗಾರರು ಗೆಲುವು ಸಾಧಿಸಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ಫೈನಲ್‌ನಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಎಸ್.ಕೆ.ದಯಾ ಫ್ರೆಂಡ್ಸ್ ಕ್ಲಬ್ ಪ್ರವೀಣ್ ಕಪ್ ಅನ್ನು ಮುಡಿಗೇರಿಸಿಕೊಂಡಿತು.ಎದುರಾಳಿ ಬಲಿಷ್ಟ ಮಲ್ನಾಡ್ ಕಿಕರ್ಸ್ ಕ್ಲಬ್ ಮೇಲೆ ದಯಾ ಫ್ರೆಂಡ್ಸ್ ಆಟಗಾರರು ಟೈ ಬ್ರೇಕರ್ ನಲ್ಲಿ 4-1 ಗೋಲುಗಳ ಮೂಲಕ ಗೆಲುವು ಸಾಧಿಸಿದರು. ಲೀಗ್‌ನಲ್ಲಿ ಸಮರ್ಥವಾಗಿಯೇ ಆಡುತ್ತಾ ಬಂದಿದ್ದ ಮಲ್ನಾಡ್ ಕಿಕರ್ಸ್ ಫೈನಲ್ ನಲ್ಲಿ ಸಮರ್ಥ ಆಟವನ್ನೇ ಪ್ರದರ್ಶಿಸಿದರೂ, ಟೈ ಬ್ರೇಕರ್‌ನಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು. ಫೈನಲ್ ತಲುಪಿದ್ದ ದಯಾ ಫ್ರೆಂಡ್ಸ್ ಕ್ಲಬ್ ಮತ್ತು ಮಲ್ನಾಡ್ ಕ್ಲಬ್ ಮೈದಾನಕ್ಕಿಳಿದಾಗ ಎಲ್ಲರಿಗೂ ಭಾರೀ ಕುತೂಹಲವೇ ಮನೆ ಮಾಡಿತ್ತು. ಎರಡು ತಂಡಗಳು ಬಲಿಷ್ಟವಾಗಿದ್ದು. ಅನುಭವಿ ಆಟಗಾರರನ್ನು ಹೊಂದಿದ್ದವು. ಇದು ಫೈನಲ್ ಪಂದ್ಯವನ್ನು ರಂಗೇರುವಂತೆ ಮಾಡಿತ್ತು. ಆಟ ಶುರುವಾದಾಗ ಎರಡು ತಂಡಗಳು ಮೈದಾನದಲ್ಲಿ ಆಕ್ರಮಣಾಕಾರಿ ಆಟ ಶುರುಮಾಡಿದವು. ಗೋಲುಗಳಿಸಲು ಎರಡು ತಂಡಗಳು ತೀವ್ರ ಸೆಣಸಾಟ ನಡೆಸಿದರೂ, ಮಧ್ಯಂತರ ಅವಧಿಗೆ ಇಬ್ಬರೂ ಗೋಲುಗಳಿಸದೆ ಸಮಬಲದಲ್ಲಿ ವಿಶ್ರಾಂತಿಗೆ ಮರಳಿದರು.ದ್ವಿತೀಯಾರ್ಧದಲ್ಲಿ ಎರಡು ತಂಡ ತುಂಬಾನೆ ಹುರುಪಿನಿಂದ ಮೈದಾನಕ್ಕಿಳಿದರು. ಜಿನುಗು ಮಳೆ ನಡುವೆಯೇ ಬಿರುಸಿನ ಆಟದೊಂದಿಗೆ ಎರಡು ತಂಡದವರು ಬೆವರು ಹರಿಸಿದರೂ ಇಬ್ಬರಿಗೂ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ. ನಾ ಮುಂದೆ, ತಾಮುಂದೆ ಎನ್ನುವಂತೆ ಇಬ್ಬರ ಸಮರ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವಂತಿತ್ತು. ಚೆಂಡಿನ ಮೇಲೆ ಯಾರೇ ಹಿಡಿತ ಸಾಧಿಸಿದರೂ, ಅವುಗಳನ್ನು ಗೋಲುಗಳಾಗಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಮಲ್ನಾಡ್ ಕಿಕರ್ಸ್ ಗೆ ಸಿಕ್ಕ ಕಾರ್ನರೆ ಪೆನಾಲ್ಟಿಯೂ ಕೂಡ ಗೋಲು ಗಳಿಸುವಲ್ಲಿ ಸಫಲವಾಗಲಿಲ್ಲ. ಆಟದ ಪೂರ್ಣಾವಧಿಗೂ ಇಬ್ಬರೂ ಮತ್ತೆ ಗೋಲು ಇಲ್ಲದೆ ವಾಪಾಸ್ ಆದರು.ಇದರ ಪರಿಣಾಮವಾಗಿ ಇಬ್ಬರಿಗೂ ರೆಫ್ರಿಗಳು ಟೈ ಬ್ರೇಕರ್ ಫಿಕ್ಸ್ ಮಾಡಿ, ಗೋಲು ಹೊಡೆಯುವುದಕ್ಕೆ ಅವಕಾಶ ನೀಡಿದರು. ಈ ಹಂತದಲ್ಲಿ ಮಲ್ನಾಡ್ ಕಿಕರ್ಸ್ 1 ಗೋಲು ಗಳಿಸುವಲ್ಲಿ ಮಾತ್ರ ಸಫಲವಾಯಿತು. ಉಳಿದ ಮೂರು ಕಿಕ್ ಗಳನ್ನು ದಯಾ ಫ್ರೆಂಡ್ಸ್ ನ ಗೋಲಿ ವಿಫಲಗೊಳಿಸಿದರು. ಆದರೆ ದಯಾ ಫ್ರೆಂಡ್ಸ್ ನ ನಾಲ್ಕು ಕಿಕ್ ಗಳು ಗೋಲುಗಳಾದವು. ಇದರಿಂದ ದಯಾ ಫ್ರೆಂಡ್ಸ್ ಬಲಿಷ್ಟ ಮಲ್ನಾಡ್ ಮೇಲೆ ವಿಜಯಸಾಧಿಸಿ, 2023-24 ಸಾಲಿನ ಲೀಗ್‌ನ ಪ್ರವೀಣ್ ಕಪ್ ತನ್ನದಾಗಿಸಿಕೊಂಡಿತು.
ರನ್ನರ್ಸ್ ಟ್ರೋಫಿ ಸ್ವೀಕರಿಸಿದ ಮಲ್ನಾಡ್ ಕಿಕರ್ಸ್:ಪಂದ್ಯದ ಮುಕ್ತಾಯ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ವಿಜೇತರಿಗೆ ಮತ್ತು ರನ್ನರ್ಸ್ ತಂಡಕ್ಕೆ ಟ್ರೋಫಿ ಮತ್ತು ಮೆಡಲ್ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮಖಂಡ ಆರ್.ಮೋಹನ್, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಶಶಿ, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶ್ರೀನಾಥ್, ಗರ್ವನಿಂಗ್ ಬೋರ್ಡ್ ಮೆಂಬರ್ ಶಿವರಾಜ್, ಸಂಸ್ಥೆಯ ಉಪಾಧ್ಯಕ್ಷ ರಾಮಚಂದ್ರ ರಾವ್ ಪವಾರ್, ಜ್ಞಾನ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವಾಸ್, ಉಪ ಪ್ರಧಾನ ಕಾರ್ಯದರ್ಶಿ ಆರಿಫ್ ಅಹಮದ್, ಖಜಾಂಚಿ ಸೂಲಯ್ಯ, ಮ್ಯಾನೆಜಿಂಗ್ ಕಮಿಟಿ ಸದಸ್ಯರಾದ ಸೂಸೈ ನಾದನ್, ಎಲ್. ವಿಜಯ್ ಕುಮಾರ್,ಕ್ಲೈಮೆಂಟ್ ರಾಯನ್, ವಿನ್ಸೆಂಟ್ ರೊಡ್ರಿಗಸ್, ಮೈಕೆಲ್ ಕಿರಣ್, ಅರ್ಪುದ ಸ್ವಾಮಿ, ಕೆ. ಹರ್ಷ ಭೋವಿ, ತಂಗರಾಜ್ , ಪತ್ರಕರ್ತ ದೇಶಾದ್ರಿ ಹೊಸ್ಮನೆ, ಮಲ್ಲಪ್ಪ ಸಂಕಿನ್, ಗಾರಾ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.