ಕಾಂಗ್ರೆಸ್ಸಿನಿಂದ ಅಧಿಕಾರಕ್ಕೇರುವ ಹಗಲುಗನಸು

KannadaprabhaNewsNetwork |  
Published : May 02, 2024, 12:15 AM IST
 ಮುಂಡರಗಿ ಪಟ್ಟಣದ 15ನೇ ವಾರ್ಡಿನ ಬನಶಂಕರಿ ಓಣಿಯಲ್ಲಿ ಬಸವರಾಜ ಬೊಮ್ಮಾಯಿ ಪರ ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ ಮತಯಾಚನೆ ಮಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ₹1ಲಕ್ಷ ಕೊಡುತ್ತೇವೆ ಎನ್ನುವ ಮಾತನ್ನು ತೆಗೆದುಹಾಕಿ

ಮುಂಡರಗಿ: ದೇಶದಲ್ಲಿ 543 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ 273 ಸ್ಥಾನ ಗೆದ್ದ ಪಕ್ಷ ಅಧಿಕಾರಕ್ಕೇರಲಿದೆ. ಆದರೆ ಕಾಂಗ್ರೆಸ್‌ ದೇಶಾದ್ಯಂತ ಕೇವಲ 230 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ, 40 ರಿಂದ 45 ಸೀಟು ಗೆಲ್ಲಿಸುವ ತಾಕತ್ತು ಇಲ್ಲದೆ ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಲೇವಡಿ ಮಾಡಿದರು.

ಅವರು ಬುಧವಾರ ಸಂಜೆ ಹಾವೇರಿ-ಗದಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 15ನೇ ವಾರ್ಡ್‌ನ ಬನಶಂಕರಿ ಓಣಿಯಲ್ಲಿ ಬಸವರಾಜ ಬೊಮ್ಮಾಯಿ ಪರ ಮತಯಾಚನೆ ಮಾಡಿ ಮಾತನಾಡಿದರು.

ಇಂದು ಚಿಕ್ಕಮಕ್ಕಳಿಂದ ಹಿಡಿದು ಮಹಿಳೆಯರು, ಯುವಕರು, ಕಾರ್ಮಿಕರು ಸೇರಿದಂತೆ ಎಲ್ಲರೂ ಸೇರಿ ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ಹಿಡಿಯಬೇಕೆನ್ನುವುದು ದೇಶಾದ್ಯಂತ ಕೇಳಿ ಬರುವ ಮಾತಾಗಿದೆ. ಇಂತಹ ವಾತಾವರಣದಲ್ಲಿ ಕಾಂಗ್ರೆಸ್ ತಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ದುರಾಸೆಯಿಂದ ಮಹಿಳೆಯರಿಗೆ ವರ್ಷಕ್ಕೆ ₹1ಲಕ್ಷಗಳನ್ನು ಗ್ಯಾರಂಟಿ ಯೋಜನೆ ಮೂಲಕ ಕೊಡುವುದಾಗಿ ಮನೆ ಮನೆಗೆ ತೆರಳಿ ಕೋಪನ್ ಕೊಡುತ್ತಿರುವುದು ಅಪಹಾಸ್ಯದ ಸಂಗತಿಯಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ₹1ಲಕ್ಷ ಕೊಡುತ್ತೇವೆ ಎನ್ನುವ ಮಾತನ್ನು ತೆಗೆದುಹಾಕಿ, ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು,ನಿಮಗೆ ತಾಕತ್ತಿದ್ದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೋ ಇಲ್ಲವೋ ಗೊತ್ತಿಲ್ಲ, ಹೆಣ್ಣುಮಕ್ಕಳ ಬಗ್ಗೆ ನಿಮಗೆ ಕಾಳಜಿ ಇದ್ದರೆ ರಾಜ್ಯ ಸರ್ಕಾರದಿಂದಲೇ ಈಗಾಗಲೇ ಘೋಷಣೆ ಮಾಡಿರುವ ₹1 ಲಕ್ಷ ಕೊಡುತ್ತೇವೆ ಎಂದು 24 ಗಂಟೆಗಳಲ್ಲಿ ಘೋಷಣೆ ಮಾಡಿದರೆ ನಾವು ನಿಮಗೆ ಶರಣಾರ್ಥಿ ಹೇಳುತ್ತೇವೆ. ಈ ರೀತಿ ಮಹಿಳೆಯರಿಗೆ ಸುಳ್ಳು ಭರವಸೆ ಕೊಡುವ ಮೂಲಕ ಹೆಣ್ಣು ಮಕ್ಕಳಿಗೆ ಮೋಸ ಮಾಡಿ ಅಧಿಕಾರಕ್ಕೆ ಬರುವ ದುರಾಸೆ ಯಾವ ನಾಗರಿಕರು ಸಹ ಒಪ್ಪುವುದಿಲ್ಲ. ಇಡೀ ದೇಶದ ಮತದಾರರು ಸಹ ಒಪ್ಪುವುದಿಲ್ಲ. ನೇರವಾಗಿ ಚುನಾವಣೆಗೆ ಬನ್ನಿ,ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಚುನಾವಣೆ ಮಾಡೋಣ ಎಂದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ₹6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ಸಿಎಂ ಬಿಎಸ್ ಯಡಿಯೂರಪ್ಪ ₹4 ಸಾವಿರ ಸೇರಿ ಒಬ್ಬ ರೈತನ ಖಾತೆಗೆ ನೇರವಾಗಿ ₹10 ಸಾವಿರ ಹಾಕುವ ರೈತಪರ ಯೋಜನೆಯೊಂದನ್ನು ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಮಕ್ಕಳು,ಕೂಲಿಕಾರರ ಮಕ್ಕಳು, ಮೀನುಗಾರರ ಮಕ್ಕಳು ಸೇರಿದಂತೆ ಅನೇಕ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲು ಪ್ರಾರಂಭಿಸಲಾಗಿತ್ತು. ಅದನ್ನು ಸಹ ನಿಲ್ಲಿಸಿದೆ. ಮಾನವೀಯ ಮೌಲ್ಯ ಇಟ್ಟುಕೊಂಡು ರಾಜಕೀಯ ಮಾಡಬೇಕೆ ಹೊರತು ಅನೀತಿಯಿಂದ ರಾಜಕಾರಣ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಜಗದೀಶ ಶೆಟ್ಟರ್‌ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ನರೇಂದ್ರ ಮೋದಿ ಆಯ್ಕೆ ಮಾಡಿದ ಉದ್ದೇಶ ಕೇವಲ ಬೆಳಗಾವಿ, ಹಾವೇರಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಇವರು ಮಾಜಿ ಮುಖ್ಯಮಂತ್ರಿಯಾಗಿರುವ ಅನುಭವದ ಆಧಾರದ ಮೇಲೆ ಈ ಅರ್ಧವಾಗದ ಕರ್ನಾಟಕವನ್ನು ಹತ್ತಾರು ಲಕ್ಷ ಕೋಟಿ ಅನುದಾನ ನೀಡುವ ಮೂಲಕ ಐದು ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆನ್ನುವ ಉದ್ದೇಶದಿಂದ ಲೋಕಸಭೆಗೆ ಕಣಕ್ಕಿಳಿಸಲಾಗಿದೆ ಎಂದರು.

ಮುಂಬರುವ ಮೇ 7ರಂದು ಎಲ್ಲ ಮತದಾರರು ತಪ್ಪದೇ ಮತಗಟ್ಟೆಗಳಿಗೆ ತೆರಳಿ ಬಿಜೆಪಿ ಕಮಲದ ಗುರುತಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಾರ್ಡ್‌ನ ಸದಸ್ಯ ಜ್ಯೋತಿ ಹಾನಗಲ್ ಮಾತನಾಡಿದರು. ಆನಂದಗೌಡ ಪಾಟೀಲ, ವೀರಣ್ಣ ತುಪ್ಪದ, ಪ್ರಶಾಂತ ಗುಡದಪ್ಪನವರ, ಕೃಷ್ಣಮೂರ್ತಿ ಗುಬ್ಬಿ, ಗುರುರಾಜ ಜ್ಯೋಶಿ, ಹರೀಶ ಕುಮಾರ, ನಾರಾಯಣಪ್ಪ ಗುಬ್ಬಿ ಸುಬ್ರಮಣ್ಯ, ಉಮೇಶ ಹಡಗಲಿ, ಮಲ್ಲಪ್ಪ ಧೋತರಗಾವಿ, ಶಂಕರಗೌಡ ಪಾಟೀಲ, ರವೀಗೌಡ ಪಾಟೀಲ, ಧ್ರುವಕುಮಾರ ಹೂಗಾರ, ಕುಮಾರ ಡೊಳ್ಳಿನ, ಗಿರೀಶ ಶೀರಿ, ಮಂಜು ಮುಧೋಳ, ಮಾರುತಿ ಭಜಂತ್ರಿ, ಪುಷ್ಪಾ ಉಕ್ಕಲಿ, ರಾಧಾ ಬಾರಕೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ