ಭದ್ರಾವತಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಸಮಕ್ಷಮ ತಿಂಗಳಿಂದಲೂ ತಣ್ಣಗಾಗಿದ್ದ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಡುವಿನ ವಾಕ್ಸಮರ ಮತ್ತೆ ಶುರುವಾಗುವಂತಹ ಲಕ್ಷಣಗಳು ಇತ್ತೀಚೆಗೆ ನಡೆದಿವೆ.
- ತರಳಬಾಳು ಹುಣ್ಣಿಮೆ ಮಹೋತ್ಸವದಿಂದಲೂ ತಣ್ಣಗಾಗಿದ್ದ ವಾದ-ಪ್ರತಿವಾದ ಮತ್ತೆ ಶುರು!
- - -
(ಶಾಸಕ-ಸಚಿವರ ವಾಕ್ಸಮರ)
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾವತಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಸಮಕ್ಷಮ ತಿಂಗಳಿಂದಲೂ ತಣ್ಣಗಾಗಿದ್ದ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಡುವಿನ ವಾಕ್ಸಮರ ಮತ್ತೆ ಶುರುವಾಗುವಂತಹ ಲಕ್ಷಣಗಳು ಇತ್ತೀಚೆಗೆ ನಡೆದಿವೆ.
ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ಜಿಲ್ಲಾಧಿಕಾರಿ ಸರ್ಕಾರದ ಭಾಗವಾಗಿ ಕೆಲಸ ಮಾಡಬೇಕೇ ಹೊರತು, ಒಂದು ಕುಟುಂಬದ ಸೇವಕರಂತೆ ನಡೆದುಕೊಳ್ಳಬಾರದು. ಜಿಲ್ಲೆಯ ಹಲವಾರು ಸರ್ಕಾರಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ತಡವಾಗಿ ಆರಂಭಿಸುತ್ತಿದೆ ಎಂದು ಫೇಸ್ ಬುಕ್, ವಾಟ್ಸಪ್‌ನಲ್ಲಿ ವೀಡಿಯೋ ಹೇಳಿಕೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.
ದಾವಣಗೆರೆ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಾ.7ರಂದು ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಆರಂಭಿಸಲಾಗಿದೆ. ಸಂಸದರಿಗಾಗಿ ಕಾದು ಕಾರ್ಯಕ್ರಮವನ್ನೇ ತಡವಾಗಿ ಆರಂಭಿಸಿದ್ದು ಸರಿಯಲ್ಲ. ನಿಗದಿತ ಸಮಯಕ್ಕೆ ಸರ್ಕಾರಿ ಕಾರ್ಯಕ್ರಮಗಳನ್ನು ಆರಂಭಿಸದಿದ್ದರೆ ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಶಾಸಕ ಬಿ.ಪಿ.ಹರೀಶ್ ನೀಡಿದ್ದರು.
ನಾನು ಸರ್ಕಾರ ಮತ್ತು ಜಿಲ್ಲಾಡಳಿತದ ತಪ್ಪುಗಳನ್ನು ಪ್ರಶ್ನಿಸುತ್ತಿದ್ದೇನೆಂಬ ಕಾರಣಕ್ಕೆ ಜಿಲ್ಲಾಧಿಕಾರಿ ನನ್ನ ಮೊಬೈಲ್ ನಂಬರನ್ನೇ ಬ್ಲಾಕ್ ಲೀಸ್ಟ್‌ಗೆ ಹಾಕಿದ್ದಾರೆ. ತಕ್ಷಣವೇ ಅದನ್ನು ತೆರವುಗೊಳಿಸಿ, ಜನರ ಸಮಸ್ಯೆಗಳ ಬಗ್ಗೆ ತಮ್ಮ ಅಹವಾಲು ಕೇಳಬೇಕು ಎಂದು ಜಿಲ್ಲಾಧಿಕಾರಿಗೆ ಬಿ.ಪಿ.ಹರೀಶ ಒತ್ತಾಯಿಸಿದ್ದರು.
ಶಾಸಕರ ಹೇಳಿಕೆಗೆ ಸಚಿವ ತಿರುಗೇಟು:
ವಿಪಕ್ಷ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿಕೆಗೆ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ. ನಾನೂ ಸಹ ಹರಿಹರ ಶಾಸಕರ ವೀಡಿಯೋ ನೋಡಿದ ತಕ್ಷಣ ಜಿಲ್ಲಾಧಿಕಾರಿಗೆ ಮಾತನಾಡಿಸಿದೆ. ಹಾಗೇನೂ ಮೊಬೈಲ್ ನಂಬರ್ ಬ್ಲ್ಯಾಕ್ ಮಾಡಿಲ್ಲ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರಿಂದ ಕರೆ ಸ್ವೀಕರಿಸಿರಲಿಲ್ಲ ಎಂದಿರುವುದಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.
ಸುಮ್ಮನೇ ಜಿಲ್ಲಾಧಿಕಾರಿ ಬಗ್ಗೆ ಮಾತನಾಡುವುದಲ್ಲ. ಜಿಲ್ಲಾಧಿಕಾರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಕರೆ ಸ್ವೀಕರಿಸಲಾಗಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ. ವಿಪಕ್ಷ ಶಾಸಕರ ಇಂತಹ ಆರೋಪಗಳೇನೂ ಹೊಸದಲ್ಲ. ದಿನವೂ ಬರುತ್ತವೆ. ಹರಿಹರ ಕ್ಷೇತ್ರವನ್ನು ಬಿಟ್ಟು, ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕನಿಗೆ ಏನು ಕೆಲಸವಿದೆ ಎಂದು ಎಸ್‌ಎಸ್‌ಎಂ ಪ್ರಶ್ನಿಸಿದರು. ಮೊದಲು ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಮಾತನಾಡಿಕೊಳ್ಳಲಿ ಎಂದು ಸಚಿವರು ತಾಕೀತು ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.