ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಶಿಷ್ಟಾಚಾರ ದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ವಿತರಿಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಜಿ.ಪಂ ಉಪಕಾರ್ಯದರ್ಶಿಗಳು ಹಾಗೂ ತಹಶೀಲ್ದಾರರಿಗೆ ತಿಳಿಸಿದರು.
ಪರೇಡ್ ಆವರಣ ಹಾಗೂ ಸುತ್ತಮುತ್ತಲಿನ ಜಾಗವನ್ನು ಮುಂಚಿತವಾಗಿ ಸ್ವಚ್ಛಳಿಸಿ ಸಿದ್ಧಗೊಳಿಸುವುದು, ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ವೇದಿಕೆ ಸಿದ್ಧತೆ, ವೇದಿಕೆ ಅಲಂಕಾರ ಮಾಡುವಂತೆ ಪಾಲಿಕೆ, ಸಶಸ್ತ್ರ ಮೀಸಲು ಪಡೆ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕ್ರೀಡಾ ಯುವಜನ ಸಬಲೀಕರಣ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.ಸರ್ಕಾರದ ಸುತ್ತೋಲೆಯಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಪ್ರತಿ ವರ್ಷದಂತೆ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಾಗೂ ಧ್ವಜಸ್ತಂಭದ ಕೆಳಗೆ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರವನ್ನು ಇರಿಸಿ ನಮನ ಸಲ್ಲಿಸಬೇಕು ಎಂದು ಹೇಳಿದರು.
ನಗರದ ಶಾಲಾ, ಕಾಲೇಜು, ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ಎನ್‌ಸಿಸಿ, ಅಗ್ನಿ ಶಾಮಕ ದಳ, ಹೋಂಗಾರ್ಡ್ಸ್ ವತಿಯಿಂದ ಸಾಮೂಹಿಕ ಕವಾಯಿತು ಏರ್ಪಡಿಸಲಾಗುವುದು. ಮಳೆಯಿಂದ ರಕ್ಷಣೆ ಪಡೆಯಲು ಕವಾಯಿತು ಮೈದಾನದಲ್ಲಿ ಜರ್ಮನ್ ಟೆಂಟ್ ಹಾಕಿಸಲು ಪಿಡಬ್ಲ್ಯುಡಿ ಇಲಾಖೆಗೆ ಸೂಚಿಸಿದರು.
ಧ್ವಜಾರೋಹಣದ ನಂತರ 3 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಬೇಕು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿ, ನಿಗದಿತ ವೇಳೆ ಯಲ್ಲಿ ಮುಗಿಯುವಂತೆ ಕ್ರಮ ಕೈಗೊಳ್ಳಲು ಡಿಡಿಪಿಐ ಅವರಿಗೆ ಸೂಚನೆ ನೀಡಿದರು. ಅಂದು ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ ಡಿಡಿಪಿಐ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗೆ ಸೂಚಿಸಿದರು.ಸನ್ಮಾನ:
ಸ್ವಾತಂತ್ರೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರು, ಆರೋಗ್ಯ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರನ್ನು ಸನ್ಮಾನಿಸುವ ಜೊತೆಗೆ ಈ ಬಾರಿ ಉತ್ತಮವಾಗಿ ಸೇವೆ ಸಲ್ಲಿಸಿದ 5 ರಿಂದ 8 ಸರ್ಕಾರಿ ಅಧಿಕಾರಿ/ನೌಕರರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಜಿ.ಪಂ ಉಪ ಕಾರ್ಯದರ್ಶಿ ಕೆ.ಆರ್.ಸುಜಾತಾ, ಎಸಿ ಸತ್ಯನಾರಾಯಣ, ತಹಶೀಲ್ದಾರ್ ಗಿರೀಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.