ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ತಾಲೂಕು ಕಚೇರಿ ಹಿಂಭಾಗದಲ್ಲಿ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಸಿದ್ಧತೆ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಲತಾಕುಮಾರಿ ನಡೆಸಿದರು.ಮೂರನೇ ತಾಲೂಕು ಮಟ್ಟದ ಸಭೆಗೆ ಬಂದಂತ ಸಾರ್ವಜನಿಕರಿಗೆ ಎಲ್ಲಾ ರೀತಿಯ ಅವರ ಕುಂದುಕೊರತೆ ಅಹವಾಲು ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಲೋಪದೋಷ ಆಗದಂತೆ ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಅವರು ತುರ್ತಾಗಿ ಈ ಜನಸಂಪರ್ಕ ಸಭೆ ನಡೆಸಲು ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಿದ್ದು ಬಂದಂತ ಎಲ್ಲಾ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಯಂ ಜನಗಣತಿ ಕೌಂಟರ್ ತೆರೆಯಲು ಸೂಚಿಸಿದಲ್ಲದೆ ಬಿಸಿಲು ಹೆಚ್ಚಾಗಿರುವ ಕಾರಣ ಸ್ಥಳದಲ್ಲಿ ವೈದ್ಯಾಧಿಕಾರಿಗಳು ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದು ಕಾರ್ಮಿಕ ಇಲಾಖೆಯಿಂದ ಈ ಶ್ರಮ್ ಕಾರ್ಡ್ ಹಾಗೂ ಅವರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಕೌಂಟರ್ ತೆರೆಯುವಂತೆ ಸೂಚನೆ ನೀಡಲಾಗಿದೆ ಎಂದರು.ಕೃಷಿ ಇಲಾಖೆ ತೋಟಗಾರಿಕೆ ಹಾಗೂ ಪಿಆರ್‌ಡಿ ಇಲಾಖೆಗೆ ಸಂಬಂಧಿಸಿದಂತೆ ವಿಶೇಷ ಕೌಂಟರ್ ತೆರೆಯಲಾಗುವುದು. ಶುಕ್ರವಾರ ಬೆಳಗ್ಗೆ ೮ರಿಂದ ಕಚೇರಿಯಲ್ಲಿ ಹಾಜರಿದ್ದು ಸಂಬಂಧಪಟ್ಟ ಇಲಾಖೆಗೆ ಅರ್ಜಿಗಳನ್ನು ಸ್ವೀಕರಿಸಿ ಟೋಕನ್ ವ್ಯವಸ್ಥೆ ಮಾಡಬೇಕು. ಅಂಗವಿಕಲರಿಗೆ ಹಾಗೂ ವೃದ್ಧರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿ ಎಲ್ಲಾ ಕಡೆ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯದ ವ್ಯವಸ್ಥೆ ಇರಬೇಕು. ಕಡ್ಡಾಯವಾಗಿ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿರಬೇಕು. ನೇರವಾಗಿ ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಅಹವಾಲು ಸಲ್ಲಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಇದಕ್ಕೆ ವ್ಯಾಪಕ ಪ್ರಚಾರದ ಜೊತೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಡಂಗೂರದ ಮೂಲಕ ಮಾಹಿತಿ ನೀಡುವಂತೆ ಸೂಚಿಸಿದರು.ಈ ವೇಳೆ ಸಕಲೇಶಪುರ ಉಪವಿಭಾಗಧಿಕಾರಿ ಹುಲುಮನಿ ತಿಮ್ಮಣ್ಣ, ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಪಿಐ ರೇವಣ್ಣ, ಇಒ ಸತೀಶ್, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾಂವಿ ಸೇರಿದಂತೆ ಇತರರು ಇದ್ದರು.