ಕಾರವಾರ: ಜಿಲ್ಲೆಯಲ್ಲಿರುವ ಸರ್ಕಾರಿ ಕೆರೆಗಳು ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಡೆದು ಅವುಗಳ ಸುತ್ತಲೂ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಕೆರೆಗಳು ಅತಿಕ್ರಮಣ ಅಥವಾ ಒತ್ತುವರಿಯಾಗಿದ್ದಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಕೆರೆಗಳ ವ್ಯಾಪ್ತಿಯಲ್ಲಿ ಸಂರಕ್ಷಣಾ ಕಾಮಗಾರಿಗಳ ಅಗತ್ಯವಿದ್ದಲ್ಲಿ ನರೇಗಾ ಮೂಲಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಕೈಗಾರಿಕೆಗಳು ಮತ್ತು ಜನವಸತಿ ಪ್ರದೇಶಗಳಿಂದ ಹರಿಯುವ ತ್ಯಾಜ್ಯ ಮತ್ತು ಮಲಿನ ನೀರು ಕೆರೆಗಳ ಒಡಲು ಸೇರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಡಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳನ್ನು ಸರ್ವೆ ಮಾಡಿ, ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಬೇಕು. ಕೆರೆಗಳ ಅಭಿವೃದ್ಧಿ ಕುರಿತಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕಾದ ಅಗತ್ಯವಿದ್ದಲ್ಲಿ ರಾಜ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿ ಕನಿಷ್ಕ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ ಮೊದಲಾದವರು ಇದ್ದರು.