ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರವಾಸೋದ್ಯಮ ಇಲಾಖೆ ಯೋಜನೆಯಡಿ ಈಚೆಗೆ ಶಾಲಾ ಮಕ್ಕಳಿಗೆ ಕರ್ನಾಟಕ ಪ್ರವಾಸ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದ ನಂತರ ಪ್ರವಾಸ ಮುಗಿದ ಮೇಲೆ ಪ್ರವಾಸ ದರ್ಶನ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲು ಶಾಲಾ ಶಿಕ್ಷಣ ಇಲಾಖೆಗೆ ತಿಳಿಸಿದ್ದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಉಪಹಾರ ಪಾರ್ಟಿ ಕೊಡುವುದಾಗಿಯೂ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸ ದರ್ಶನ ಕುರಿತು ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ನವನಗರದ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಪೃಥ್ವಿ ಕುಂಬಾಳಿವತಿ (ಪ್ರಥಮ), ಕದಾಂಪೂರ ಆರ್.ಸಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಇಂಗಳಗಿ (ದ್ವಿತೀಯ), ನವನಗರದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಶ್ರದ್ದಾ ಹಳ್ಳೂರ (ತೃತೀಯ) ಸ್ಥಾನ ಪಡೆದಿದ್ದರು.ವಿಜೇತ ಶಾಲಾ ಮಕ್ಕಳನ್ನು ಭಾನುವಾರ ತಮ್ಮ ಮನೆಗೆ ಆಹ್ವಾನಿಸಿ, ಮಕ್ಕಳನ್ನು ಸನ್ಮಾನಿಸಿ ನಂತರ ಅವರ ಜೊತೆಗೆ ಉಪಹಾರ ಸೇವನೆ ಮಾಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದ ಬೀಳಗಿ ಆದರ್ಶ ವಿದ್ಯಾಲಯದ ಷಫಾ ನಿಂಬಾಳ್ಕರಗೆ ಆಹ್ವಾನಿಸಿ ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಚ್.ಜಿ. ಮಿರ್ಜಿ, ಆದರ್ಶ ವಿದ್ಯಾಲಯದ ಮುಖ್ಯಗುರು ಬಿ.ವಿ. ಪಾಟೀಲ ಇದ್ದರು.