ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಕಂಡುಬಂದರೆ ಅಥವಾ ದೂರು ಬಂದರೆ ತಕ್ಷಣ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮರಳು ಮೇಲ್ವಿಚಾರಣೆ, ನಿಯಂತ್ರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಕುರಿತು ಸಾರ್ವಜನಿಕರಿಂದ ನಿತ್ಯ ದೂರು ಬರುತ್ತಿವೆ. ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು.ಅಕ್ರಮ ಮರಳು ಸಂಗ್ರಹಣೆ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ನೇರ ಜವಾಬ್ದಾರಿ. ತಾಲೂಕಿನ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕು. ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಆರ್.ಟಿ.ಒ., ಪರಿಸರ ನಿಯಂತ್ರಣ ಮಂಡಳಿ ಹೀಗೆ ಎಲ್ಲಾ ಇಲಾಖೆ ಅಧಿಕಾರಿಗಳು ಸಂಘಟಿತವಾಗಿ ಗಸ್ತು ಮಾಡುವ ಮೂಲಕ ಅಕ್ರಮ ಮರಳು ಗಣಿಗಾರಿಕೆ, ಸಾಗಟಕ್ಕೆ ನಿಯಂತ್ರಣ ಹೇರಬೇಕು ಎಂದರು.
ಮರಳು ಅಕ್ರಮ ಸಾಗಾಟದಲ್ಲಿ ಭಾಗಿಯಾಗುವ ವಾಹನಗಳನ್ನು ಆರ್‌ಟಿಓ ಮತ್ತು ಸಂಬಂಧಿಸಿದ ಅಧಿಕಾರಿಗಳು ಸೀಜ್ ಮಾಡಬೇಕು. ರಾಯಲ್ಟಿಗಿಂತ ಹೆಚ್ಚಿನ ಟ್ರಿಪ್ ಸಾಗಾಣಿಕೆಯಾಗದಂತೆ ನೊಡಿಕೊಳ್ಳಬೇಕು. ಜಿಪಿಎಸ್ ಅಳವಡಿಸಿಕೊಂಡಿರುವ ಲಾರಿಗಳಿಗೆ ಮಾತ್ರ ಮರಳು ಸಾಗಣೆಗೆ ಪರ್ಮಿಟ್ ಕೊಟ್ಟು, ಅಕ್ರಮವಾಗಿ ಸಾಗಣೆ ಮಾಡುವ ಲಾರಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿಂದ ಡಿ.1ರವರೆಗೆ ಅನಧಿಕೃತ ಮರಳು ಸಾಗಣೆ ಪ್ರಕರಣದಲ್ಲಿ 62 ಎಫ್.ಐ.ಆರ್ ದಾಖಲಿಸಿ ಆರ್.ಟಿ.ಒ.ದಿಂದ 2.09 ಲಕ್ಷ ರು. ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 12.74 ಲಕ್ಷ ರು. ಸೇರಿ ಒಟ್ಟು 14.83 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅರಣ್ಯ ಸಂರಕ್ಷಣಾಧಿಕಾರಿ ಕಾಲೋಜ್ ಪಾಟೀಲ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಭಾರಿ ಹಿರಿಯ ಭೂ ವಿಜ್ಞಾನಿ ಲಿಂಗರಾಜ, ಆರ್.ಟಿ.ಒ. ಅಧಿಕಾರಿಗಳು, ಎಲ್ಲಾ ತಾಲೂಕಿನ ತಹಸೀಲ್ದಾರರು ಇದ್ದರು. ತಾಲೂಕು ಹಂತದಲ್ಲಿ ಸಮಿತಿ ರಚಿಸಲು ಸೂಚನೆ:ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಪರವಾನಗಿ, ರಾಯಲ್ಟಿ ಸೇರಿ ಇನ್ನಿತರ ದಾಖಲೆ ತಪಾಸಣೆ ಮಾಡಬೇಕು. ಅತಿಭಾರದೊಂದಿಗೆ ಸಾಗುವ ವಾಹನಗಳಿಗೆ ದಂಡ ಹಾಕುವುದಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇನ್ನು ತಾಲೂಕು ಹಂತದಲ್ಲಿ ಪ್ರತಿ 15 ದಿನಕ್ಕೊಮ್ಮೆ ಮರಳು ಮೇಲ್ವಿಚಾರಣೆ, ನಿಯಂತ್ರಣ ಸಮಿತಿ ಸಭೆ ನಡೆಸಬೇಕು. ಸಹಾಯಕ ಆಯುಕ್ತರ ನೇತೃತ್ವದ ಸಮಿತಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದರು.