- ಕಬ್ಬು ಬೆಳೆಗಾರ ಬೇಡಿಕೆ ಈಡೇರಿಸಲು, ರೈತರ ನೆರವಿಗೆ ಧಾವಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಒತ್ತಾಯ - - -
ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಗಳ ಒಕ್ಕೂಟ- ಕರ್ನಾಟಕದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಒಕ್ಕೂಟದ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರಲ್ಲದೇ, ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಬಲ್ಲೂರು ರವಿಕುಮಾರ, ಇಡೀ ರಾಜ್ಯದಲ್ಲಿ ಕಿತ್ತು ತಿನ್ನುವ ಭೀಕರ ಬರ ಆವರಿಸಿದೆ. ಕೇಂದ್ರ-ರಾಜ್ಯ ಸರ್ಕಾರ ಪ್ರಥಮಾದ್ಯತ ಮೇಲೆ ರೈತರ ನೆರವಿಗೆ ಧಾವಿಸಲಿ. ರೈತರಿಗೆ ನೂರಾರು ಸಮಸ್ಯೆ, ಸಂಕಷ್ಟ, ಸವಾಲು ಕಾಡುತ್ತಿವೆ. ಕಬ್ಬು ಬೆಳೆಗಾರರು 6 ತಿಂಗಳಿನಿಂದ ಚಳವಳಿ ನಡೆಸಿದ್ದಾರೆ. ಕೇಂದ್ರವು ಎಫ್ಆರ್‌ಪಿ ₹4500, ರಾಜ್ಯ ಸರ್ಕಾರವು ಎಸ್ಎಪಿ ₹1 ಸಾವಿರ ನಿಗದಿಪಡಿಸಿ, ಒಟ್ಟು ₹5500 ಘೋಷಣೆ ಮಾಡಲಿ ಎಂದರು.
ಕಬ್ಬಿಗೆ ರಾಜ್ಯ ಸರ್ಕಾರ ಎಸ್‌ಎಪಿ ದರ ಘೋಷಿಸಲಿ. ಸಕ್ಕರೆ ಮಾರಾಟದ ಕನಿಷ್ಠ ದರ ಹೆಚ್ಚಿಸಿ, ಎಫ್‌ಆರ್‌ಪಿ ದರವನ್ನು ಕೇಂದ್ರ ಏರಿಸಬೇಕು. ಕಬ್ಬಿನ ಇಳುವರಿ ಮೋಸ, ತೂಕದಲ್ಲಿ ರೈತರಿಗೆ ಆಗುವ ಮೋಸ ತಪ್ಪಿಸಬೇಕು. ರೈತರ ಕಬ್ಬಿನ ಬಾಕಿ ಹಣ ತಕ್ಷಣ ಕೊಡಿಸಬೇಕು. ಜಾನುವಾರುಗಳಿಗೆ ಸಮರ್ಪಕ ನೀರು, ಮೇವಿನ ವ್ಯವಸ್ಥೆ ಆಗಬೇಕು. ರೈತರ ಐಪಿ ಸೆಟ್‌ಗೆ ಹಗಲು 10 ತಾಸು ಸಮರ್ಪಕ ವಿದ್ಯುತ್ ನೀಡಬೇಕು. ವರ್ಷವಿಡೀ ವಿಬಿ ಜಿ ರಾಮ್ ಜಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡಬೇಕು. ಕೃಷಿಗೆ ಮೊದಲು ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರ, ರಾಂಪುರ ಬಸವರಾಜ, ಪಿ.ಪಿ.ಮರುಳಸಿದ್ದಯ್ಯ, ವೈ.ಎಚ್. ಸೋಮಗೊಂಡ, ಜಯನಾಯ್ಕ, ಮಿಯ್ಯಾಪುರ ತಿರುಮಲೇಶ, ಎಂ.ವಿ.ನಾಗರಾಜ, ಎಚ್.ಬಿ.ನಾಗರಾಜಪ್ಪ, ವಿಜಯ್, ಕೆ.ಟಿ.ಗಣೇಶ, ಬಿ.ಎ.ಸುರೇಶ, ಆರ್.ಜಿ.ಬಸವರಾಜ, ಸಂತೋಷಕುಮಾರ, ಪರಶುರಾಮ, ಹೆಬ್ಬಾಳ್ ರಾಜು, ಪರಶುರಾಮ ರೆಡ್ಡಿ, ದಶರತ, ಬೆಳವನೂರು ಕರಿಬಸಪ್ಪ ಇತರರು ಇದ್ದರು.
(ಬಾಕ್ಸ್)
ರೈತರು ಬ್ಯಾಂಕ್, ಖಾಸಗಿಯವರು, ಲೇವಾದೇವಿಯರು ಹೀಗೆ ನಾನಾ ಕಡೆ ಸಾಲ, ಕೈ ಸಾಲ ಪಡೆದು, ಮರುಪಾವತಿ ಮಾಡಲಾಗದೇ ಪರದಾಡುತ್ತಿದ್ದಾರೆ. ಜಮೀನಿನಲ್ಲಿ ಬೆಳೆ ಇಲ್ಲದೇ, ಕಂಗಾಲಾಗಿದ್ದಾರೆ. ಆಗಾಗ ಸುರಿದ ಒಂದಿಷ್ಟು ಮಳೆಯನ್ನೇ ನಂಬಿಕೊಂಡು, ಮತ್ತೆ ಸಾಲ ಮಾಡಿ, ಬಿತ್ತನೆ ಮಾಡಿದ್ದ ಬೆಳೆಯೂ ಒಣಗಿದ್ದು, ಫಸಲು ಕೈಗೆ ಬಾರದೇ ಹಸಿ ಬರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕುಗಳ ರೈತರ ಸಾಲವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ಮನ್ನಾ ಮಾಡಿ, ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
-3ಕೆಡಿವಿಜಿ3: ದಾವಣಗೆರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ, ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ಕೇಂದ್ರ, ರಾಜ್ಯ ಸರ್ಕಾರಕ್ಕೆ ರೈತ ಸಂಘಟನೆ ಮುಖಂಡರು, ರೈತರು ಮನವಿ ಅರ್ಪಿಸಿದರು.