ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಪುರಸಭೆಗೆ ವಾಣಿಜ್ಯ ಮಳಿಗೆಗಳಿಂದ ತರುವ ಲಕ್ಷಾಂತರ ರುಪಾಯಿ ಆದಾಯ ಬರುತ್ತಿದ್ದ ಬಸ್ ನಿಲ್ದಾಣ ಮುಂಭಾಗ ಹಾಗೂ ಮುಖ್ಯ ರಸ್ತೆಯ ಸುಮಾರು ೬೩ ವಾಣಿಜ್ಯ ಮಳಿಗೆಗಳಿಗೆ ಇದೇ ಜನವರಿ ೨ರಂದು ಹರಾಜು ಪ್ರಕ್ರಿಯೆ ನಡೆದಿತ್ತು. ಅದರೆ ಈ ಹಿಂದೆ ಲಕ್ಷಾಂತರ ರು.ಗಳಿಗೆ ಹರಾಜಾಗಿದ್ದ ಮಳಿಗೆಗಳು, ನಂತರ ಉಳ್ಳವರು ಕಡಿಮೆ ಬಿಡ್‌ನಲ್ಲಿ ಭಾಗವಹಿಸಿ ಅತಿ ಕನಿಷ್ಠ ಬೆಲೆಗೆ ಹರಾಜು ಪ್ರಕ್ರಿಯೆ ನಡೆದಿದ್ದು ಇದರಲ್ಲಿ ಬಾರಿ ಗೋಲ್‌ಮಾಲ್ ನಡೆದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.ಇದರ ವಿರುದ್ಧ ಸಾಮಾಜಿಕ ಹೋರಾಟಗಾರರಾದ ವೆಂಕಟೇಶ್, ತೋಟೇಶ್, ಸತೀಶ್, ಸೇರಿದಂತೆ ಸಾರ್ವಜನಿಕರು ಹಾಗು ಕೆಲ ಸಂಘ ಸಂಸ್ಥೆಗಳು, ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮ ಪಾಲನೆ ಮಾಡಿಲ್ಲ. ಅನಾವಶ್ಯಕ ನಿಯಮಗಳನ್ನು ಹೇರಿದ್ದರಿಂದ ಸಾರ್ವಜನಿಕರು ಟೆಂಡರ್ ಹಾಕಲು ಸಾಧ್ಯವಾಗಿರಲಿಲ್ಲ. ಕೇವಲ ಇದು ಒಳ ಒಪ್ಪಂದವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದರ ಜೊತೆಗೆ ಮಾರ್ಚ್ ೬ರಂದು ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಪುರಸಭೆ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರವಾಗಿದ್ದು ಇದರ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವುದರಿಂದ ನ್ಯಾಯಾಲಯದಲ್ಲಿ ಹರಾಜು ಪ್ರಕ್ರಿಯೆ ತಡೆಯಾಜ್ಞೆ ಇದ್ದರೂ ಸಹ ಹರಾಜು ಮಾಡಲಾಗಿದೆ. ಇದನ್ನು ಕೂಡಲೆ ರದ್ದು ಪಡಿಸಬೇಕು. ಸರ್ಕಾರದ ಹಲವಾರು ನಿಯಮಗಳು ಹಾಗೂ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘನೆಯಾಗಿದ್ದು ಕೂಡಲೇ ಈ ೬೩ ವಾಣಿಜ್ಯ ಮಳಿಗೆಗಳನ್ನು ರದ್ದುಪಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಈ ಎಲ್ಲಾ ಮಾಹಿತಿ ಕಲೆಹಾಕಿ ಸಂಪೂರ್ಣ ಪಾರದರ್ಶಕವಾಗಿ ಸರ್ಕಾರದ ಸುತ್ತೋಲೆಯ ನಿಯಮಗಳ ಅನುಸಾರ ಹಾಗೂ ಕೆಪಿಪಿಪಿ ನಿಯಮಗಳನ್ನು ಅನುಸರಿಸಿ ಮತ್ತೊಮ್ಮೆ ಪಾರದರ್ಶಕವಾಗಿ ಇ ಪ್ರಕ್ರೀಯ್ಮೆಂಟ್ ಮೂಲಕ ಮರು ಹರಾಜು ಮಾಡಲು ಆದೇಶವನ್ನು ಹಿಂದಿನ ಹರಾಜು ಪ್ರಕ್ರಿಯೆ ರದ್ದು ಪಡಿಸಿ ಮರು ಹರಾಜು ಹಾಕಲು ಜಿಲ್ಲಾಧಿಕಾರಿ ಸತ್ಯಭಾಮ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿ ಆದೇಶಕ್ಕೆ ಸಾರ್ವಜನಿಕರು ಭಾರಿ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅತಿ ಕಡಿಮೆ ಬಾಡಿಗೆ ದರದಲ್ಲಿ ಮಳಿಗೆಗಳನ್ನು ಕೊಂಡು ನಂತರ ವರ್ತಕರಿಗೆ ಒಳ ಬಾಡಿಗೆಗೆ ಕೊಟ್ಟು ಹೆಚ್ಚಿನ ಹಣ ಮಾಡುವ ಉದ್ದೇಶವಿತ್ತು. ಅಲ್ಲದೆ ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಸದಸ್ಯರು ಸೇರಿದಂತೆ ಕೆಲವರಿಗೆ ಇಂತಿಷ್ಟು ಕಮಿಷನ್ ನಿರ್ಣಯ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಕಳೆದ ಎರಡು ತಿಂಗಳಿಂದಲೂ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದ ಪುರಸಭೆ ಮಳಿಗೆ ಹರಾಜು ವಿಚಾರಕ್ಕೆ ಜಿಲ್ಲಾಧಿಕಾರಿಗಳ ಆದೇಶ ವಿರಾಮ ಕೊಟ್ಟಂತಾಗಿದೆ.---------------------------------------------------------------------------