ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ಡಿಸಿ ಭೇಟಿ

KannadaprabhaNewsNetwork | Published : Jul 6, 2024 12:51 AM

ಸಾರಾಂಶ

ಹೊಳೆನರಸೀಪುರ ತಾಲೂಕಿನಲ್ಲಿ ಡೆಂಘೀನಿಂದ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿದ್ದಾರೆ. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ ಅವರಿಗೆ ಮೊಬೈಲ್‌ ಒಳಗಿಡಿ ಎಂದು ಸಲಹೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಮೊಬೈಲ್ ಒಳಗೆ ಇಡ್ರೀ, ನಾನು ಬೆಳಗ್ಗೆ ೭ ಗಂಟೆಗೆ ಬಂದು ತೇಜೂರು, ಗುಡ್ಡೇನಹಳ್ಳಿಗೆ ಭೇಟಿ ನೀಡಿದ್ದೇನೆ. ನಿಮ್ಮ ಮನೆ ಹತ್ತಿರ ಬಂದರೇ ನೀವಿಲ್ಲ. ನೀವು ಯಾವ ಹಳ್ಳಿಗೆ ಭೇಟಿ ನೀಡಿದ್ದೀರಿ? ಇಬ್ಬರು ಮಕ್ಕಳ ಸಾವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೀಗಾದರೇ ಹೇಗೆ? ಮೊದಲು ಅಕ್ಟೀವ್ ಆಗಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ ಅವರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸಲಹೆ ನೀಡಿದರು. ಹೊಳೆನರಸೀಪುರ ತಾಲೂಕಿನಲ್ಲಿ ಡೆಂಘೀನಿಂದ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಟಿಎಚ್‌ಒ ಅವರು ಮೊಬೈಲ್ ನೋಡುತ್ತಾ ನಿಂತಿದ್ದನ್ನು ಕಂಡು ಮೊಬೈಲ್ ಒಳಗೆ ಇಡ್ರೀ ಎಂದು ರೇಗಿ, ರೋಗಿಗಳಿಗೆ ಸಾಂತ್ವನದ ಮಾತುಗಳನ್ನಾಡಿ, ಒಬ್ಬಬ್ಬ ರೋಗಿಯನ್ನು ಭೇಟಿ ಮಾಡಿದಾಗಲೂ ಒಂದೊಂದು ಸಲಹೆ ನೀಡಿದರು. ಒಳರೋಗಿಗಳ ವಾರ್ಡಿಗೆ ಭೇಟಿ ನೀಡಿ, ಯುವಕರಿಗೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆದರೂ ನೀವುಗಳೇ ದಾಖಲಾಗಿದ್ದೀರಿ ಚಿಂತಿಸಬೇಡಿ. ಬೇಗ ಗುಣಮುಖರಾಗುತ್ತೀರಿ ಎಂದು ಮಮತೆಯಿಂದ ಅವರು ರೋಗಿಗಳ ಜತೆ ಮಾತನಾಡುತ್ತಿದ್ದ ರೀತಿ ಅವರಲ್ಲಿನ ಕಾಳಜಿಗೆ ಸಾಕ್ಷಿಯಾಗಿತ್ತು.ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಶೌಚಾಲಯ ಸ್ವಚ್ಛವಾಗಿಲ್ಲದ್ದನ್ನು ಕಂಡು ಸ್ವಚ್ಛತೆಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗೆ ಮುಂದಿನ ಸಾಲಿನಲ್ಲಿ ಟೆಂಡರ್ ನೀಡದಂತೆ ಆಡಳಿತಾಧಿಕಾರಿಗೆ ತಾಕೀತು ಮಾಡಿದರು. ನೆಲ ಮಹಡಿಯ ಶೌಚಾಲಯದ ಒಳಗೆ ಹೋಗಿ, ಒಬ್ಬ ವ್ಯಕ್ತಿ ಹೋಗಿ ಬಂದಾಗಲೂ ನೀರು ಹಾಕಲು ಒಬ್ಬರನ್ನ ನೇಮಿಸಿ ಎಂದು ಸೂಚಿಸಿದರು. ಕೆಲವೊಂದು ಕಡೆ ಸ್ವಚ್ಛತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಯೋಗಾಲಯಕ್ಕೆ ಭೇಟಿ ನೀಡಿ, ಡೆಂಘೀ ಪರೀಕ್ಷೆಯ ರ್ಯಾಪಿಡ್ ಡಯಾಗ್ನೋಸ್ಟಿಕ್ ಕಿಟ್ ಕಾರ್ಯಕ್ಷಮತೆಯ ಕಿಟ್ ಪರಿಶೀಲನೆ ನಡೆಸಿ, ವಿವಿಧ ಪರೀಕ್ಷೆಗಳ ಅಗತ್ಯ ಸಾಮಗ್ರಿಗಳ ಬಗ್ಗೆ ವಿಚಾರಿಸಿ, ಅಗತ್ಯವಿದ್ದರೆ ತಿಳಿಸಿ, ಅನುಮೋದನೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್, ಡಾ. ಸೆಲ್ವಕುಮಾರ್, ಡಾ. ಸತ್ಯಪ್ರಕಾಶ ಹಾಗೂ ಇತರರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಸಣ್ಣಪುಟ್ಟ ನ್ಯೂನತೆಗಳು ಇದ್ದು, ಸರಿಪಡಿಸಲು ತಿಳಿಸಿದ್ದೇನೆ ಮತ್ತು ಆಸ್ಪತ್ರೆಯಲ್ಲಿ ವ್ಯವಸ್ಥೆಯೂ ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ನಾಗಪ್ಪ, ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್, ಡಾ. ಸೆಲ್ವಕುಮಾರ್, ಶುಶ್ರೂಷ ಅಧಿಕಾರಿ ಶಾಂತಿ, ಶುಶ್ರೂಷಕಿ ಪವಿತ್ರ, ಇತರರು ಇದ್ದರು.

Share this article