ಕನ್ನಡಪ್ರಭ ವಾರ್ತೆಹನೂರು
ಏ. 26ರಂದು ಇಂಡಿಗನತ್ತ ಗ್ರಾಮದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಜನರು ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನೀರವ ಮೌನ ಹಾಗೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಬಗ್ಗೆ ಡೀಸಿ ಶಿಲ್ಪಾನಾಗ್ ಹಾಗೂ ಎಸ್ಪಿ ಪದ್ಮಿನಿ ಸಾಹು ಭೇಟಿ ನೀಡಿ ಗ್ರಾಮಸ್ಥರ ಪರಿಸ್ಧಿತಿ ಪರಿಶೀಲಿಸಿದರು.ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮತಗಟ್ಟೆ ಧ್ವಂಸ ಪ್ರಕರಣ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆಯಿಂದ ಇಡೀ ಗ್ರಾಮದ ಗ್ರಾಮಸ್ಧರು ಮನೆಗಳಿಗೆ ಬೀಗ ಜಡಿದು ಬಂಧನ ಭೀತಿಯಿಂದ ಗ್ರಾಮ ತೊರೆದಿರುವುದರಿಂದ ಅಲ್ಲಿರುವ ವಯಸ್ಸಾದವರು ಹಾಗೂ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರು ಇನ್ನಿತರರು ಗ್ರಾಮದಲ್ಲಿ ತಮ್ಮವರನ್ನು ದೂರ ಮಾಡಿಕೊಂಡು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಮತ್ತು ಜನಜಾನುವಾರುಗಳ ಮೇವು ನೀರು ಮತ್ತು ನಿವಾಸಿಗಳಿಗೆ ಆಹಾರ ಇಲ್ಲದೆ ಸಮಸ್ಯೆಗಳಿಂದ ದಿನದೊಡುತ್ತಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆ ಪ್ರತ್ಯಕ್ಷ ವರದಿಗಳನ್ನು ನೀಡುವ ಮೂಲಕ ಜಿಲ್ಲಾಡಳಿತ ಗಮನ ಸೆಳೆದಿದೆ.ಈ ಹಿನ್ನೆಲೆ ಜಿಲ್ಲಾಡಳಿತ ಸೋಮವಾರ ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತನಾಡಿ, ಪರಿಶೀಲಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದೆ.ನಿರಂತರ ವರದಿ ಪ್ರಕಟ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಹಾಗೂ ಮೆಂದರೆ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಜೊತೆ ಶಾಂತಿ ಸಭೆ ನಡೆಸಿದ್ದರು ಸಹ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿಂದ ಗ್ರಾಮದಲ್ಲಿ ಉಳಿದಿರುವವರು ಸಂಕಷ್ಟಗಳ ನಡುವೆ ದಿನದೊದುತ್ತಿರುವ ಬಗ್ಗೆ ಕನ್ನಡಪ್ರಭ ಬೆಳಕು ಚೆಲ್ಲುವ ಕೆಲಸ ಮಾಡಿತ್ತು.
ಇದೇ ಸಂದರ್ಭದಲ್ಲಿ ಎಸ್ಪಿ ಪದ್ಮಿನಿ ಸಾಹು, ಜಿಪಂ ಸಿಇಒ ಅನಂದ್ ಪ್ರಕಾಶ್ ಮೀನಾ, ಡಿವೈಎಸ್ಪಿ ಧರ್ಮೇಂದರ್, ಪಶುಸಂಗೋಪನ ಇಲಾಖೆ ನಿರ್ದೇಶಕ ರಾಮೇಗೌಡ, ತಾಲೂಕು ಪಶು ವೈದ್ಯಾಧಿಕಾರಿ ಸಿದ್ದರಾಜು, ಸಮಾಜ ಕಲ್ಯಾಣ ಅಧಿಕಾರಿ ಮಂಜುಳಾ, ಕಾರ್ಯನಿರ್ವಹಣಾಧಿಕಾರಿ ಉಮೇಶ್, ಇನ್ಸ್‌ಪೆಕ್ಟರ್ ಜಗದೀಶ್ ರಾಜಸ್ವ ನಿರೀಕ್ಷಕ ಶಿವಕುಮಾರ್, ಜಲಜೀವನ್ ಮಿಷನ್ ಅಧಿಕಾರಿ ಹರೀಶ್, ಪಿಡಿಒ ಕಿರಣ್, ಗ್ರಾಮ ಲೆಕ್ಕಾಧಿಕಾರಿ ವಿನೋದ್, ಚೆಸ್ಕಾಂ ಎಇ ಮಹೇಶ್, ಪೊಲೀಸ್ ಸಿಬ್ಬಂದಿ ವರ್ಗ ಗ್ರಾಮಸ್ಥರಿದ್ದರು.ಮನೆ ಮನೆ ಭೇಟಿ ಸಮಸ್ಯೆ ಆಲಿಕೆ:ಇಂಡಿಗನತ್ತ ಗ್ರಾಮದಲ್ಲಿ ಗಲಭೆ ಪ್ರಕರಣದಿಂದ ಬಂಧನ ಭೀತಿಯಿಂದ ಗ್ರಾಮ ತೊರದಿರುವ ಗ್ರಾಮಸ್ಥರ ಮಹಿಳೆಯರು ಮಕ್ಕಳು ವಯೋವೃದ್ಧರು ಇರುವ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಮಕ್ಕಳು ಮಹಿಳೆಯರ ಜೊತೆ ಮತ್ತು ವಯಸ್ಸಾದವರ ಜೊತೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಮಾತನಾಡಿ, ನಿಮ್ಮ ಗ್ರಾಮದಲ್ಲಿ ಕೆಲವರ ಮೇಲೆ ಮಾತ್ರ ಗಲಭೆ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಹೀಗಾಗಿ ಗ್ರಾಮದಿಂದ ಹೊರಗಿರುವ ನಿಮ್ಮವರನ್ನು ಕರೆಸಿಕೊಂಡು ಮೊದಲಿನಂತೆ ಗ್ರಾಮದಲ್ಲಿ ಸಂಯಮದಿಂದ ಶಾಂತಿ ಸುವ್ಯವಸ್ಥೆಯಿಂದ ಇರಲು ತಿಳಿಸಿದರು. ಲೋಪದೋಷವಿಲ್ಲದಂತೆ ಕ್ರಮ ವಹಿಸಿ:
ಲೋಪದೋಷಗಳು ಬರದಂತೆ ಇಂಡಿಗನತ್ತ ಮತ್ತು ಮೆಂದಾರ ಗ್ರಾಮದ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಜೊತೆಗೆ ಇಲ್ಲಿನ ಜನತೆಯ ಹಾಗೂ ಜನಜಾನುವಾರುಗಳ ಸಮಸ್ಯೆಗಳ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಸಹ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಗ್ರಾಮಸ್ಥರ ಸಮಸ್ಯೆ ಮತ್ತು ಇಲ್ಲಿನ ವಯಸ್ಸಾದವರು ಗರ್ಭಿಣಿಯರು ಮತ್ತು ಮಕ್ಕಳ ಬಗ್ಗೆ ವಿಶೇಷವಾಗಿ ಗಮನ ಹರಿಸಿ ಅವರಿಗೆ ಬೇಕಾಗಿರುವ ಸೂಕ್ತ ಸೌವಲತ್ತು ಕಲ್ಪಿಸಲು ಮುಂದಾಗಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.ಮೆಂದಾರೆ ಹಾಡಿಗೆ ಭೇಟಿ:
ಇಂಡಿಗನತ್ತ ಗ್ರಾಮದಲ್ಲಿ ಏ.26ರಂದು ಮತದಾನ ಮಾಡಲು ಬಂದಂತಹ ಮೆಂದಾರೆ ಗ್ರಾಮಸ್ಥರ ಮೇಲೆ ಇಂಡಿಗನತ್ತ ಗ್ರಾಮಸ್ಥರು ಹಲ್ಲೇ ನಡೆಸಿ ಹಲವರು ಗಾಯಗೊಂಡಿದ್ದರು. ಹೀಗಾಗಿ ಗ್ರಾಮದಲ್ಲಿ ಭಯದ ವಾತಾವರಣದಿಂದ ಇದ್ದ ಸೋಲಿಗ ಸಮುದಾಯದ ನಿವಾಸಿಗಳಿಗೆ ಡೀಸಿ ಭೇಟಿ ನೀಡಿ ಗ್ರಾಮಸ್ಥರು ಯಾವುದೇ ಭಯದ ವಾತಾವರಣವಿಲ್ಲದೆ ಮೊದಲಿನಂತೆ ತಾವು ಇರಬೇಕು. ನಿಮ್ಮ ರಕ್ಷಣೆಗೆ ಜಿಲ್ಲಾಡಳಿತ ಇದೆ ಹೀಗಾಗಿ ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಲು ಬಿಡುವುದಿಲ್ಲ ಹೀಗಾಗಿ ಎರಡು ಗ್ರಾಮದ ನಿವಾಸಿಗಳು ಮೊದಲಿನಂತೆ ಸಂಯಮ ಸಹೋದರರಂತೆ ಇರಬೇಕು ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಈಗಾಗಲೇ ಪೊಲೀಸ್ ಇಲಾಖೆ ಬಂಧಿಸಿ ಕ್ರಮ ಕೈಗೊಂಡಿದೆ ಗ್ರಾಮದಲ್ಲಿರುವ ನಿವಾಸಿಗಳು ಯಾವುದೇ ಅಳುಕಿಲ್ಲದೆ ನಿಮ್ಮ ಕೆಲಸ ಕಾರ್ಯಗಳ ಮೂಲಕ ಧೈರ್ಯದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಮೆಂದಾರೆ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.ಗ್ರಾಮದ ಅಭಿವೃದ್ಧಿಗೆ ನೀಲನಕ್ಷೆ ತಯಾರಿ:
ಆರೋಗ್ಯ ಹದಗೆಟ್ಟಿ ಗಮನ ಹರಿಸಿ ಅಧಿಕಾರಿಗಳು ನಿವಾಸಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಜೊತೆಗೆ ಇಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಗೆ ನೀಲ ನಕ್ಷೆ ತಯಾರಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಜೊತೆಗೆ ಆಯಾ ಇಲಾಖೆಯ ಅನುಮೋದನೆಗಾಗಿ ಸಹ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪುಗೊಳ್ಳುತ್ತಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಹಂತ ಹಂತವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.