ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಮತಗಟ್ಟೆಗಳಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ಕರ್ತವ್ಯ ನಿರತ ಸಿಬ್ಬಂದಿ ಕಾರ್ಯವನ್ನು ವೀಕ್ಷಿಸಿ ಅವರನ್ನು ಹುರಿದುಂಬಿಸಿದರು.
ಮಹಿಳಾ ಮತಗಟ್ಟೆ ಸಿಬ್ಬಂದಿಗೆ ನೀಡಿದ್ದ ಸಮವಸ್ತ್ರವನ್ನೇ ತಾವೂ ಧರಿಸುವ ಮೂಲಕ ತಾವೂ ಕೂಡಾ ನಿಮ್ಮೊಂದಿಗಿದ್ದೇನೆ ಎಂದು ಮಹಿಳಾ ಸಿಬ್ಬಂದಿಗೆ ಸಂದೇಶ ನೀಡಿದರು.ನಗರದ ಸೆಂಟ್ ಮೈಕಲ್ ಶಾಲೆಯಲ್ಲಿ ತೆರೆಯಲಾದ ಮಹಿಳಾ ಮತಗಟ್ಟೆಗೆ ಭೇಟಿ ನೀಡಿ, ಸಿಬ್ಬಂದಿಯೊಂದಿಗೆ ಮತದಾನದ ಪ್ರಮಾಣ ಕುರಿತಂತೆ ಮಾಹಿತಿ ಪಡೆದು, ಮತದಾನ ಮಾಡಲು ಸರದಿಯಲ್ಲಿ ನಿಂತಿದ್ದ ಮಹಿಳೆಯರೊಂದಿಗೆ ಮಾತನಾಡಿದರು.
ಬಳಿಕ ಜಝಾರ್ ಶಾಲೆಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆ ವೀಕ್ಷಿಸಿ ಮತಗಟ್ಟೆಯಲ್ಲಿ ಸಿಬ್ಬಂದಿಗೆ ಸಿದ್ಧಪಡಿಸಿದ್ದ ಆಹಾರವನ್ನೇ ಸಿಬ್ಬಂದಿಗಯೊಂದಿಗೆ ತಾವೂ ಸೇವಿಸಿದರು. ಆನಂತರ ಕಿನ್ನರದಲ್ಲಿ ತೆರೆಯಲಾಗಿದ್ದ ವಿಕಲಚೇತನ ಮತಗಟ್ಟೆಗೆ ಭೇಟಿ ನೀಡಿ ಈ ಮತಗಟ್ಟೆಯಲ್ಲಿ ನೋಂದಾವಣೆಯಾಗಿದ್ದ 19 ಅಂಗವಿಕಲರು ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಹಕ್ಕು ಚಲಾಯಿಸಿ ಶೇ. 100 ಸಾಧನೆ ಆಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮತಗಟ್ಟೆಯನ್ನು ಸಿಂಗರಿಸಿದ್ದ ರೀತಿ ಮತ್ತು ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.ಜಿಲ್ಲಾಧಿಕಾರಿ ಕಚೇರಿಯ ಪುರುಷ ಮತ್ತು ಮಹಿಳಾ ಸಿಬ್ಬಂದಿ ಕೂಡಾ ಒಂದೇ ರೀತಿಯ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವ ಜತೆಗೆ ಜಿಲ್ಲಾಧಿಕಾರಿ ಅವರೊಂದಿಗೆ ಗುಂಪು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಶಾಂತಿಯುತ ಚುನಾವಣೆ: ಜಿಲ್ಲಾಧಿಕಾರಿ ಕೃತಜ್ಞತೆಕಾರವಾರ: ಲೋಕಸಭಾ ಚುನಾವಣೆ ಸಂಬಂಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಸಹಕರಿಸಿದ ಎಲ್ಲ ಮತದಾರರು, ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು, ಚುನಾವಣಾ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ ಕೃತಜ್ಞತೆ ತಿಳಿಸಿದ್ದಾರೆ.ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ, ಜಿಪಂ ವತಿಯಿಂದ ಕೈಗೊಂಡ ವೈವಿಧ್ಯಮಯವಾದ ವ್ಯಾಪಕ ಮತದಾನ ಜಾಗೃತಿ ಕಾರ್ಯಕ್ರಮಗಳು, ಕಳೆದ ಬಾರಿ ಕಡಿಮೆ ಮತದಾನವಾಗಿದ್ದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮತಗಟ್ಟೆಯಲ್ಲಿ ಮತದಾರರಿಗೆ ಮತದಾನ ಮಾಡಲು ಯಾವುದೇ ತೊಂದರೆಯಾಗದಂತೆ ಸೂಕ್ತ ನೆರಳು ಮತ್ತು ನೀರಿನ ಸೌಲಭ್ಯ ಒದಗಿಸಿರುವುದು ಹಾಗೂ ಹೆಚ್ಚಿನ ಸಂಖ್ಯೆಯ ಯುವ ಮತದಾರರು ಸೇರಿದಂತೆ ಎಲ್ಲ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿರುವ ಕಾರಣ ಮತದಾನ ಪ್ರಮಾಣವು ಕಳೆದ ಬಾರಿಗಳಿಗಿಂತಲೂ ದಾಖಲೆಯ ಪ್ರಮಾಣದಲ್ಲಿ ಹೆಚ್ಚಿದ್ದು, ಈ ದಾಖಲೆಗಾಗಿ ಸಹಕರಿಸಿದ ಜಿಲ್ಲೆಯ ಎಲ್ಲರಿಗೂ ಅಭಿನಂದನೆ, ಕೃತಜ್ಞತೆ ಹೇಳಿದ್ದಾರೆ.