2025ರಲ್ಲಿ ಡಿಸಿಸಿ ಬ್ಯಾಂಕ್‌ನ ಹೊಸ ಶಾಖೆ ಆರಂಭಿಸುವ ಗುರಿ

KannadaprabhaNewsNetwork | Published : Dec 25, 2024 12:48 AM

ಸಾರಾಂಶ

DCC Bank aims to open a new branch in 2025

-ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಮಾಹಿತಿ । 19 ಶಾಖೆ ಆರಂಭಿಸುವ ಗುರಿ

--------

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಮ್ಮ ಬ್ಯಾಂಕಿನ ಗ್ರಾಹಕರ ಮನೆ ಬಾಗಿಲಿಗೇ ಸೇವೆ ನೀಡುವ ಉದ್ದೇಶದಿಂದ 2025ರಲ್ಲಿ ಜಿಲ್ಲೆಯಲ್ಲಿ ಇನ್ನೂ 19 ಹೊಸ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಮ್ಮ ಬ್ಯಾಂಕ್‌ ಶೂನ್ಯ ಬಡ್ಡಿ ದರದಲ್ಲಿ 1,200 ಕೋಟಿ ರು. ಕೃಷಿ ಬೆಳೆ ಸಾಲ ನೀಡುವ ಯೋಜನೆ ರೂಪಿಸಿದೆ. ಈಗಾಗಲೇ ಪ್ರಕಟಿಸಿದಂತೆ ಸೊರಬ ತಾಲೂಕಿನ ಜಡೆ, ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮಗಳಲ್ಲಿ ತನ್ನ ಮೂರು ಹೊಸ ಶಾಖೆಗಳನ್ನು ಆರಂಭಿಸಿಸಲಾಗಿದೆ ಎಂದು ತಿಳಿಸಿದರು.

2025 ರಲ್ಲಿ 19 ಹೊಸ ಶಾಖೆಗಳನ್ನು ಆರಂಭಿಸಲು ರಿಸರ್ವ್ ಬ್ಯಾಂಕ್ ಗೆ ಅನುಮತಿ ಕೋರಲಾಗಿದೆ. ಇವು ಆರಂಭವಾದರೆ ಡಿಸಿಸಿ ಬ್ಯಾಂಕ್ 50 ಶಾಖೆಗಳನ್ನು ಹೊಂದಿದಂತಾಗುತ್ತದೆ ಎಂದರು.

ಶಿವಮೊಗ್ಗ ತಾಲೂಕಿನಲ್ಲಿ ಕಾಚಿನಕಟ್ಟೆ, ಗಾಜನೂರು , ನವಲೆ, ಆಯನೂರು ಹಾಗೂ ಹೊಳಲೂರು, ಭದ್ರಾವತಿ ತಾಲೂಕಿನಲ್ಲಿ ಬಾರಂದೂರು ಹಾಗೂ ಆನವೇರಿ, ತೀರ್ಥಹಳ್ಳಿ ತಾಲೂಕಿನ ಬಿ.ಬಿ.ಮೇಗರವಳ್ಳಿ, ತೀರ್ಥಹಳ್ಳಿ ಎಪಿಎಂಸಿ ಯಾರ್ಡ್, ದೇವಂಗಿ, ಆರಗ ಹಾಗೂ ಕಟ್ಟೆ ಹಕ್ಕಲು, ಸಾಗರ ತಾಲೂಕಿನ ತ್ಯಾಗರ್ತಿ ಹಾಗೂ ಬ್ಯಾಕೊಡು, ಸೊರಬ ತಾಲೂಕಿನ ಕುಪ್ಪಗಡ್ಡೆ ಹಾಗೂ ಚಂದ್ರಗುತ್ತಿ, ಶಿಕಾರಿಪುರ ತಾಲೂಕಿನ ಹಿತ್ಲ ಹಾಗೂ ಹೊಸ ನಗರ ತಾಲೂಕಿನ ನಿಟ್ಟೂರು ಹಾಗೂ ನಗರದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂಬ ಮಾಹಿತಿ ನೀಡಿದರು.

2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ರು.ಲಾಭ ಗಳಿಸಿದ್ದು, 10.58 ಕೋಟಿ ನಿವ್ವಳ ಲಾಭಹೊಂದಲಾಗಿದೆ. ಷೇರು ಬಂಡಾವಾಳ 185 ಕೋಟಿ ಹಾಗೂ 67.46 ಕೋಟಿ ರು. ಹಾಗೂ ದುಡಿಯುವ ಬಂಡವಾಳ 2332. 29 ಕೋಟಿ ರು. ಆಗಿದೆ. ಬರುವ 2025ಕ್ಕೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ ಒಟ್ಟು ರು. 1,200 ಕೋಟಿ ಹಾಗೂ ಶೇ. 3ರ ಬಡ್ಡಿ ದರದಲ್ಲಿ 1500 ರೈತರಿಗೆ 80 ಕೋಟಿ ರು. ಮಧ್ಯಮಾವಧಿ ಕೃಷಿ ಸಾಲ ಹಂಚಿಕೆ ಮಾಡುವ ಯೋಜನೆ ಹೊಂದಲಾಗಿದೆ ಎಂದರು.

ಶಿವಮೊಗ್ಗ ಉಪ ವಿಭಾಗದಲ್ಲಿ ಈಗಾಗಲೇ ಸಂಚಾರಿ ಶಾಖೆಯನ್ನು ಆರಂಭಿಸಲಾಗಿದ್ದು ಸಾಗರ ಉಪವಿಭಾಗದಲ್ಲೂ ಇದನ್ನು ಆರಂಭಿಸಲಾಗುವುದು ಎಂದ ಅವರು ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲೇ 7ನೇ ವೇತನ ಆಯೋಗದ ಶಿಫಾರಸ್ಸನ್ನು ತಮ್ಮ ಬ್ಯಾಂಕಿನ ಉದ್ಯೋಗಿಗಳಿಗೆ ನೀಡಿದ ಹೆಗ್ಗಳಿಕೆ ತಮ್ಮದಾಗಿದೆ ಎಂದು ತಿಳಿಸಿದರು.

ರೈತರ ಪರವಾಗಿಯೇ ಜನ್ಮತಾಳಿದ ನಬಾರ್ಡ ಇಲ್ಲಿಯವರೆಗೆ ರೈತರಿಗೆ ಬೇಕಾದಷ್ಟು ಸಾಲ ನೀಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರೈತರಿಗೆ ಸಾಲ ನೀಡುವಾಗ ನಿಮ್ಮ ಸಂಪನ್ಮೂಲ ನೀವೇ ಕ್ರೋಡಿಕರಿಸಿಕೊಳ್ಳಿ ಎಂಬ ಸೂಚನೆ ನೀಡಿದೆ. ಇದು ಸಹಕಾರಿ ಬ್ಯಾಂಕುಗಳ ಆತಂಕಕ್ಕೆ ಕಾರಣವಾಗಿದೆ. ಖಾಸಗಿ ಬ್ಯಾಂಕುಗಳಿಗೆ ನಬಾರ್ಡ ಪರೋಕ್ಷವಾಗಿ ಪ್ರೋತ್ಸಾಹ ನೀಡಬೇಕು. ನಬಾರ್ಡ್‌ ರೈತರಿಗೆ ಪೂರ್ಣ ಪ್ರಮಾಣದ ಪುನರ್ಧನ ನೀಡಬೇಕು. ಆ ಮೂಲಕ ತನ್ನ ಮೂಲ ಧ್ಯೇಯದಿಂದ ವಿಮುಖವಾಗಬಾರದು ಎಂದು ಸಲಹೆ ನೀಡಿದರು.

ತಾವು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಡಿಸಿಸಿ ಬ್ಯಾಂಕುಗಳಿಗೆ ಅವಶ್ಯವಿದ್ದಷ್ಟು ಸಾಲ ಒದಗಿಸಲಾಗುತ್ತಿತ್ತು. ಆದರೆ, ಈಗ ಬೆಳ್ಳಿ ಪ್ರಕಾಶ್ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಮೇಲೆ ಡಿಸಿಸಿ ಬ್ಯಾಂಕುಗಳಿಗೆ ನೀಡುವ ಸಾಲದ ಪ್ರಮಾಣ ಗಣನೀಯ ತಗ್ಗಿದೆ. ಅಪೆಕ್ಸ್ ನಿಂದ ಸಾಲ ನೀಡದೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ಎಂದು ಹೇಳುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಿಸಿ ಬ್ಯಾಂಕ್ ವತಿಯಿಂದ ನೂತನವಾಗಿ ಹೊರತಂದ 2025ರ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಕೆ.ಪಿ. ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ಸಿ. ಹನುಮಂತಪ್ಪ, ಮಹಾಲಿಂಗಯ್ಯ ಶಾಸ್ತ್ರಿ , ಕೆ.ಪಿ.ರುದ್ರಗೌಡ, ದಶರಥಗಿರಿ, ಸಿಇಒ ಅನ್ನಪೂರ್ಣ, ಪ್ರಧಾನ ವ್ಯವಸ್ಥಾಪಕರಾದ ಸುಜಾತಾ ಇದ್ದರು.

---------------------

ಪೋಟೋ: ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಮಾತನಾಡಿದರು.

24ಎಸ್‌ಎಂಜಿಕೆಪಿ01

Share this article