ಕನ್ನಡಪ್ರಭವಾರ್ತೆ ಶಿವಮೊಗ್ಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಆರ್.ಎಂ. ಮಂಜುನಾಥಗೌಡ ಅವರಿಗೆ ಇದೀಗ ಇ.ಡಿ ಶಾಕ್ ನೀಡಿದೆ! ಗುರುವಾರ ಬೆಳ್ಳಂಬಳಗ್ಗೆ ಶಿವಮೊಗ್ಗ ಸೇರಿದಂತೆ ಗೌಡರಿಗೆ ಸೇರಿದ ಮೂರು ಮನೆಗಳ ಮೇಲೆ ಸುಮಾರು 15 ಅಧಿಕಾರಿಗಳಿರುವ ತಂಡದಿಂದ ಏಕಕಾಲದಲ್ಲಿ ದಾಳಿ ನಡೆದಿದೆ. ಬಿಗಿ ಪೊಲೀಸ್ ಬಂದೋ ಬಸ್ತಿನಲ್ಲಿ ಈ ದಾಳಿ ನಡೆಸಲಾಗಿದ್ದು, ಸಂಜೆಯವರೆಗೂ ಶೋಧ ಕಾರ್ಯ ನಡೆಸಲಾಗಿದೆ. ಶಿವಮೊಗ್ಗ ನಗರದ ಶರಾವತಿ ನಗರದ ಗೌಡರ ನಾದಿನ ಉಷಾ ಅವರ ಮನೆ, ತೀರ್ಥಹಳ್ಳಿ ಪಟ್ಟಣದ ಮತ್ತು ಕರಕುಚ್ಚಿ ಗ್ರಾಮದ ತೋಟದ ಮನೆಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ಡಿಸಿಸಿ ಬ್ಯಾಂಕ್ ಸಿಟಿ ಬ್ರ್ಯಾಂಚ್‌ನಲ್ಲಿ ನಡೆದ ನಕಲಿ ಆಭರಣ ಅಡಮಾನ ಪ್ರಕರಣದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಪ್ರಕರಣಕ್ಕೂ, ಮಂಜುನಾಥಗೌಡರ ಮೇಲಿನ ದಾಳಿಗೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಎರಡು ತಿಂಗಳ ಹಿಂದೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿ ಸಹಾಯಕ ನಿರ್ದೇಶಕ ಅಜಯ್ ಚೌದರಿ ಅವರು ಇ-ಮೇಲ್ ಮೂಲಕ ಪತ್ರ ಬರೆದು, ನಕಲಿ ಬಂಗಾರ ಆಭರಣ ಅಡವು ಪ್ರಕರಣದ ಕುರಿತ ಮಾಹಿತಿ ಕೇಳಿದ್ದರು. ಹೀಗಾಗಿ, ಈ ದಾಳಿ ಇದೇ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ಊಹಿಸಲಾಗಿದೆ. ಯಾವ ಪ್ರಕರಣವಿದು?: 2013-14ರ ಅವಧಿಯಲ್ಲಿ ಡಿಸಿಸಿ ಬ್ಯಾಂಕ್‌ನ ಸಿಟಿ ಬ್ರ್ಯಾಂಚ್‌ನಲ್ಲಿ ನಕಲಿ ಬಂಗಾರವನ್ನು ಇಟ್ಟು ಸುಮಾರು ₹62 ಕೋಟಿ ಸಾಲ ನೀಡಲಾಗಿತ್ತು. ಈ ಅವಧಿಯಲ್ಲಿ ಆರ್.ಎಂ. ಮಂಜುನಾಥಗೌಡ ಅಧ್ಯಕ್ಷರಾಗಿದ್ದರು. 2014ರ ಜೂನ್ ತಿಂಗಳ ಮೊದಲ ವಾರದಲ್ಲಿ ಇದು ಬೆಳಕಿಗೆ ಬರುತ್ತಿದ್ದಂತೆ ಭಾರೀ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು. 2014ರ ಜೂನ್ 17ರಂದು ಬ್ಯಾಂಕ್ ಆಗಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾಗಭೂಷಣ ಅವರು ದೊಡ್ಡಪೇಟೆ ಪೊಲಿಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಬಳಿಕ ಡಿಸಿಐಬಿ ಪೊಲೀಸರಿಗೆ ಹಾಗೂ ಬಳಿಕ ಸಿಐಡಿ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಹಲವಾರು ತಿರುವುಗಳನ್ನು ಪಡೆದುಕೊಂಡ ಈ ಪ್ರಕರಣದಲ್ಲಿ ಸಿಟಿ ಬ್ರ್ಯಾಂಚ್‌ನ ಆಗಿನ ಮ್ಯಾನೇಜರ್ ಶೋಭಾ ಸೇರಿದಂತೆ 18 ಮಂದಿಯ ಬಂಧನ ನಡೆದಿತ್ತು. ಜೊತೆಗೆ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಾಗಭೂಷಣ ಅವರನ್ನು ಕೂಡ ಬಂಧಿಸಲಾಗಿತ್ತು. ಅಂತಿಮವಾಗಿ ಸಿಐಡಿ ತನ್ನ ಚಾಜ್ ಶೀಟ್‌ನಲ್ಲಿ ಮಂಜುನಾಥಗೌಡರ ಹೆಸರನ್ನು ಕೈಬಿಟ್ಟಿತ್ತು. ಇದಾದ ಐದು ವರ್ಷಗಳ ಬಳಿಕ ಗೌಡರ ಸಹಕಾರಿ ಸಂಸ್ಥೆಯ ಪ್ರಾಥಮಿಕ ಸದಸ್ಯತ್ವ ವಜಾಗೊಂಡಿದ್ದರಿಂದ ಮಂಜುನಾಥಗೌಡ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಕೂಡ ವಜಾಗೊಂಡಿದ್ದರು. ಕಳೆದ ತಿಂಗಳಷ್ಟೇ ಬದಲಾದ ರಾಜಕೀಯ ಬೆಳವಣಿಗೆಯ ತಿರುವಿನಲ್ಲಿ ಮತ್ತೆ ಡಿಸಿಸಿ ಬ್ಯಾಂಕ್‌ಗೆ ಮರು ಎಂಟ್ರಿ ಕೊಟ್ಟಿದ್ದ ಮಂಜುನಾಥಗೌಡ ಅವರು ಸೆ.29ರಂದು ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. - - - ಬಾಕ್ಸ್ ಇ-ಮೇಲ್ ಮೂಲಕ ಮಾಹಿತಿ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿ ಸಹಾಯಕ ನಿರ್ದೇಶಕ ಅಜಯ್ ಚೌದರಿ ಅವರು ಎರಡು ತಿಂಗಳ ಹಿಂದೆ ಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಇ-ಮೇಲ್ ಮೂಲಕ ಪತ್ರ ಬರೆದು ನಕಲಿ ಬಂಗಾರ ಆಭರಣ ಅಡವು ಪ್ರಕರಣದ ಕುರಿತ ಮಾಹಿತಿ ಕೇಳಿದ್ದರು. 2012-14ರ ಅವಧಿಯಲ್ಲಿ ₹62 ಕೋಟಿ ಸಾಲ ಪಡೆದವರ ವಿವರ, ಬ್ಯಾಂಕ್ ಖಾತೆ, ಇ-ಕೆವೈಸಿ, ಆಧಾರ್ ಮತ್ತಿತರ ಮಾಹಿತಿಯ ಜೊತೆಗೆ ಆ ಸಂದರ್ಭದಲ್ಲಿದ್ದ ಬ್ಯಾಂಕ್ ಜನರಲ್ ಮ್ಯಾನೇಜರ್, ಶಾಖಾ ವ್ಯವಸ್ಥಾಪಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಂಗಾರದ ಮೌಲ್ಯಮಾಪಕರು ಹಾಗೂ ನಿರ್ದೇಶಕರ ಎಲ್ಲ ವಿವರಗಳನ್ನು ನೀಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿಯು ಇದೇ ಪ್ರಕರಣಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. - - - -05kpsmg11: ಶಿವಮೊಗ್ಗ ನಗರದ ಶರಾವತಿ ನಗರದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ ಆರ್.ಎಂ. ಮಂಜುನಾಥಗೌಡರ ನಾದಿನಿ ಮನೆ.