ಡಿಸಿಸಿ ಬ್ಯಾಂಕ್‌ನಿಂದ ₹858.24 ಕೋಟಿ ಕೆಸಿಸಿ ಬೆಳೆ ಸಾಲ ವಿತರಣೆ: ಪ್ರವೀಣ್‌

KannadaprabhaNewsNetwork |  
Published : Nov 01, 2025, 02:00 AM IST
 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಅವರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2024-25ನೇ ಸಾಲಿನಲ್ಲಿ ಜಿಲ್ಲೆಯ 69850 ರೈತರಿಗೆ ₹ 983 ಕೋಟಿ ಗಳಷ್ಟು ಕೆಸಿಸಿ ಬೆಳೆ ಸಾಲ ನೀಡಲು ಇರಿಸಿಕೊಂಡಿದ್ದ ಗುರಿಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ 56915 ರೈತರಿಗೆ ₹858.24 ಕೋಟಿಯಷ್ಟು ಸಾಲ ವಿತರಿಸಿದೆ ಎಂದು ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ತಿಳಿಸಿದರು.

- ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2024-25ನೇ ಸಾಲಿನಲ್ಲಿ ಜಿಲ್ಲೆಯ 69850 ರೈತರಿಗೆ ₹ 983 ಕೋಟಿ ಗಳಷ್ಟು ಕೆಸಿಸಿ ಬೆಳೆ ಸಾಲ ನೀಡಲು ಇರಿಸಿಕೊಂಡಿದ್ದ ಗುರಿಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ 56915 ರೈತರಿಗೆ ₹858.24 ಕೋಟಿಯಷ್ಟು ಸಾಲ ವಿತರಿಸಿದೆ ಎಂದು ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ತಿಳಿಸಿದರು.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಅವರ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕ್‌ನ ಪ್ರಗತಿ ವರದಿ ಮಂಡಿಸಿ ಈ ಮಾಹಿತಿ ನೀಡಿದರು.2025-26ನೇ ಸಾಲಿಗೆ ಹಣಕಾಸಿನ ಲಭ್ಯತೆ ಆಧರಿಸಿ ಒಂದು ಸಾವಿರ ಕೋಟಿ ರು. ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದೆ. 2024-25 ನೇ ಸಾಲಿಗೆ ಶೇ.3ರ ಬಡ್ಡಿ ದರದಲ್ಲಿ 339 ರೈತರಿಗೆ ₹17 ಕೋಟಿ ಮಧ್ಯಮಾವಧಿ ಸಾಲ ವಿತರಣಾ ಗುರಿ ನಿಗದಿಪಡಿಸಿಕೊಂಡಿದ್ದು. ಕಳೆದ ಮಾರ್ಚ್ ಅಂತ್ಯಕ್ಕೆ 232 ರೈತರಿಗೆ ₹15.90 ಕೋಟಿ ವಿತರಿಸಲಾಗಿದೆ. 2024-25 ನೇ ಸಾಲಿಗೆ ಒಟ್ಟು 12759 ಸಾಲಗಾರ ಸದಸ್ಯರಿಗೆ ₹474.67 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ. ಪ್ರಸ್ತುತ ವರ್ಷ ₹370 ಕೋಟಿ ಗಳ ಕೃಷಿಯೇತರ ಸಾಲ ವಿತರಣಾ ಗುರಿ ಹೊಂದಿದ್ದು, ಇದರೊಂದಿಗೆ ಎಲ್ಲ ವರ್ಗದ ಜನರ ಶ್ರೇಯೋಭಿ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬ್ಯಾಂಕ್‌ನಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ ಒಟ್ಟು 6400 ಸ್ವಸಹಾಯ ಗುಂಪುಗಳಿದ್ದು, 2024-25 ರಲ್ಲಿ 61 ಸ್ವಸಹಾಯ ಗುಂಪುಗಳಿಗೆ ₹89 ಲಕ್ಷ ಗಳ ಸಾಲ ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯ ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘ ಗಳಿಗೆ ಬಹು ಸೇವಾ ಯೋಜನೆಯ ಮೂಲಕ 43 ಸಂಘಗಳಿಗೆ ₹15.97 ಕೋಟಿ ಸಾಲವನ್ನು ಕನಿಷ್ಠ ಬಡ್ಡಿ (ಶೇ.4) ದರದಲ್ಲಿ ಗೋದಾಮು ನಿರ್ಮಾಣಕ್ಕೆ ನೀಡಲಾಗಿದೆ. ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಶಾಖೆಗಳಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುತ್ತಿರುವ ಐಎಂಪಿಎಸ್ ಮತ್ತು ಯುಪಿಐ-ಫೋನ್ ಪೇ ಸೇವೆಯನ್ನು ನಮ್ಮ ಬ್ಯಾಂಕ್‌ನ ಗ್ರಾಹಕರಿಗೂ ಒದಗಿಸಿದ್ದು, ಸಹಕಾರ ಬ್ಯಾಂಕ್‌ಗಳು ಸಹ ಷೆಡ್ಯೂಲ್ ಬ್ಯಾಂಕ್‌ಗಳಿಗೆ ಸರಿಸಮಾನ ಎಲ್ಲ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಸೇವೆ ನೀಡಲಾಗುತ್ತಿದೆ ಎಂದರು.

ಪ್ಯಾಕ್ಸ್ ಗಣಕೀಕರಣ ಯೋಜನೆ ಅನುಷ್ಠಾನಗೊಳಿಸಿದ್ದು, ಜಿಲ್ಲೆಯ 6 ಪ್ಯಾಕ್ಸ್‌ಗಳನ್ನು ಕೇಂದ್ರ ಸರ್ಕಾರದಿಂದ ಇ-ಪ್ಯಾಕ್ಸ್ ಎಂದು ಗುರುತಿಸಿದ್ದು, ಈ ಪೈಕಿ ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಪ್ಯಾಕ್ಸ್ ರಾಜ್ಯದ ಪ್ರಥಮ ಇ-ಪ್ಯಾಕ್ಸ್ ಎಂದು ಗುರುತಿಸಲ್ಪಟ್ಟಿದೆ. ಬ್ಯಾಂಕ್‌ನ ಅಭಿವೃದ್ಧಿ ಹಾಗೂ ತಾಂತ್ರಿಕ ವ್ಯವಸ್ಥೆ ಬಗ್ಗೆ ಮತ್ತು ಬ್ಯಾಂಕ್‌ನಲ್ಲಿ ಯುಪಿಐ-ಫೋನ್ ಪೇ ವ್ಯವಸ್ಥೆ ಜಾರಿಗೊಳಿಸಿರುವ ಬಗ್ಗೆ ನಬಾರ್ಡ್ ಅಧಿಕಾರಿ ಡಾ.ಸುರೇಂದ್ರ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ನೀಡಿದರು. ಬ್ಯಾಂಕ್‌ನ ಠೇವಣಿ ಸಂಗ್ರಹಣೆ, ಗುಣಮಟ್ಟದ ಸಾಲ ನೀಡಿಕೆ, ಸಾಲ ವಸೂಲಾತಿ ಮತ್ತು ತಾಂತ್ರಿಕ ಅಂಶಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿರು ವುದನ್ನು ಶ್ಲಾಘಿಸಿದರು.

ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಿ.ಎಸ್.ಸುರೇಶ್, ಉಪಾಧ್ಯಕ್ಷ ಎಚ್.ಬಿ.ಸತೀಶ್, ನಿರ್ದೇಶಕರಾದ ಮುಗಳವಳ್ಳಿ ಪರಮೇಶ್ವರಪ್ಪ, ಎಂ.ಎಸ್.ನಿರಂಜನ್, ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಇಮ್ಯಾನ್ಯುಯೆಲ್ ರೆಜಿಸ್ ಹಾಜರಿದ್ದರು.

30 ಕೆಸಿಕೆಎಂ 3 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಅವರನ್ನು ಗೌರವಿಸಲಾಯಿತು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!