ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನೇಮಕಾತಿ ಅಕ್ರಮ ಕುರಿತು ಅಧಿಕೃತವಾಗಿ ಶನಿವಾರದಿಂದ ತನಿಖೆ ಆರಂಭಗೊಂಡಿದೆ. ಸಹಕಾರಿ ಹಿರಿಯ ಜಂಟಿ ನಿಬಂಧಕ ಶಶಿಧರ್ ನೇತೃತ್ವದ ನಾಲ್ವರ ತಂಡ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿತು. ಬಳಿಕ ಡಿಸಿಸಿ ಬ್ಯಾಂಕ್‌ಗೆ ತೆರಳಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ದಾಖಲಾತಿಯ ಸಂಗ್ರಹ ಕಾರ್ಯ ಆರಂಭ ಮಾಡಿತು. ಈ ತಂಡಕ್ಕೆ ನೇಮಕಾತಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆಹೋಗಿದ್ದ 13 ಮಂದಿಯ ಜೊತೆಗೆ ಹಣ ನೀಡಿ, ಹುದ್ದೆ ಪಡೆದ ಮೂರು ಮಂದಿ ಕೂಡ ಸಾಕ್ಷಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ನೇಮಕಾತಿ ಬಳಿಕ ತಮ್ಮ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿ, ಅದನ್ನು ನಗದು ರೂಪದಲ್ಲಿ ಡ್ರಾ ಮಾಡಿ ಹುದ್ದೆ ನೀಡಲು ಸಹಕರಿಸಿದವರು ಪಡೆದಿದ್ದಾರೆ ಎಂದು ಈಗಾಗಲೇ ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಳಿದವರು ನೇಮಕಾತಿಗಾಗಿ ತಮ್ಮಿಂದ ಹಣ ಕೇಳಿರುವ ಸಂಬಂಧ ಆಡಿಯೋ ಮತ್ತು ವೀಡಿಯೋ ದಾಖಲೆಗಳನ್ನು ಕೂಡ ಒದಗಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಮಾಹಿತಿ ಸಂಗ್ರಹ ಇನ್ನೂ ಒಂದೆರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. - - - -ಫೋಟೋ: ಡಿಸಿಸಿ ಬ್ಯಾಂಕ್