ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕಸ್ನೇಹಿಯಾಗುವ ಉದ್ದೇಶ ಹೊಂದಿದೆ ಜೊತೆಗೆ ಭದ್ರತೆಯ ದೃಷ್ಟಿಯಿಂದಾಗಿ ಆಧುನಿಕ ಸೌಲಭ್ಯಗಳನ್ನು ನೀಡಲು ಶಾಖಾ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತಿದೆ ಎಂದು ವಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ತಿಳಿಸಿದರು.ನಗರದ ಸ್ಟೇಷನ್ ರಸ್ತೆಯಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಶಾಖೆಯ ನೂತನ ಸ್ವಂತ ಕಟ್ಟಡ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ನಮ್ಮ ಬ್ಯಾಂಕ್ ತನ್ನ ಗ್ರಾಹಕರಿಗೆ ತನ್ನ ಸೇವೆಯನ್ನು ಇನ್ನೂ ಗುಣಮಟ್ಟ ಹಾಗೂ ತ್ವರಿತಗತಿಯಲ್ಲಿ ನೀಡಲು ಬದ್ಧವಾಗಿದೆ. ಇದಕ್ಕಾಗಿ ಸ್ವಂತ ಕಟ್ಟಡ ನಿರ್ಮಿಸಿ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದರು. ವಿಡಿಸಿಸಿ ಬ್ಯಾಂಕ್ ರೈತರು ಹಾಗೂ ರೈತೇತರ ಗ್ರಾಹಕರಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಗ್ರಾಹಕರು ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಢವಳಗಿ ಮಾತನಾಡಿ, ನಮ್ಮ ಬ್ಯಾಂಕ್ ಸದಾ ಗ್ರಾಹಕರ ಹಿತವನ್ನೇ ಬಯಸುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸದಾ ಮುಂದಿರುವ ನಮ್ಮ ಬ್ಯಾಂಕ್ ಇದೀಗ, ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಇನ್ನೂ ಪರಿಣಾಮಕಾರಿ ಸೇವೆ ನೀಡಲು ಮುಂದಾಗಿದೆ ಎಂದರು.ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಬಿ.ನಿಡೋಣಿ, ಚಂದ್ರಶೇಖರ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಸುರೇಶಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಅರವಿಂದ ಪೂಜಾರಿ, ಬ್ಯಾಂಕಿನ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ, ಉಪ ಪ್ರಧಾನ ವ್ಯವಸ್ಥಾಪಕರಾದ ಎಸ್.ಡಿ.ಪಾಟೀಲ, ಜೆ.ಬಿ.ಪಾಟೀಲ, ಎಸ್.ಬಿ.ಪಾಟೀಲ, ಎಂ.ಜಿ.ಬಿರಾದಾರ, ನೋಡೆಲ್ ಅಧಿಕಾರಿ ಎಸ್.ಎನ್.ಪಾಟೀಲ ಸೇರಿದಂತೆ ಬ್ಯಾಂಕ್ ಸಂಯೋಜಿತ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಓಗಳು, ಸಿಬ್ಬಂದಿ ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು. ಶಾಖಾ ವ್ಯವಸ್ಥಾಪಕರಾದ ಸಿ.ಎಂ.ಶೆಟಗಾರ ಸ್ವಾಗತಿಸಿದರು.