ಕನ್ನಡಪ್ರಭ ವಾರ್ತೆ ಬೀದರ್
ಬಿಎಸ್‌ಎಸ್‌ಕೆ ಕಾರ್ಖಾನೆಯ ಪುನಾರಂಭ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಜಿಲ್ಲೆಯ ಲಕ್ಷಾಂತರ ರೈತರ ಖಾತೆಗಳನ್ನು, ಠೇವಣಿ ಹೊಂದಿರುವ ಡಿಸಿಸಿ ಬ್ಯಾಂಕ್ ಉಳಿಸಿಕೊಳ್ಳುವದು ಮುಖ್ಯ ಹೀಗಾಗಿ ಬ್ಯಾಂಕ್ ಸಾಲ ಪಾವತಿಸಿ ಕಾರ್ಖಾನೆಯ ಪುನಾರಂಭದ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅದ್ಯಕ್ಷ ಅಮರ್ ಖಂಡ್ರೆ ಖಡಕ್ಕಾಗಿ ನುಡಿದರು.ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್ ಹಾಗೂ ಮಾರುತಿರಾವ್ ಮೂಳೆ ಸೇರಿದಂತೆ ಮತ್ತಿತರ ಶಾಸಕರು ಬಿಎಸ್‌ಎಸ್‌ಕೆ ಕಾರ್ಖಾನೆ ಪುನಾರಂಭವಾಗಬೇಕು ಅದಕ್ಕಾಗಿ ಕಾರ್ಖಾನೆಯನ್ನು ಲೀಸ್ ನೀಡಲು ಡಿಸಿಸಿ ಬ್ಯಾಂಕ್ ಸಾಲ ಮರುಪಾವತಿಯಲ್ಲಿ ಸರಳೀಕರಣ ಮಾಡಲಿ ಎಂದು ಆಗ್ರಹಿಸಿದರು.
ಬಿಎಸ್‌ಎಸ್‌ಕೆ ಕಾರ್ಖಾನೆ ಸ್ಥಗಿತಗೊಂಡಿದ್ದು ರೈತರ ಕಬ್ಬು ಹೊರ ರಾಜ್ಯಗಳಿಗೆ ಸಾಗಿಸುವ ಅನಿವಾರ್ಯತೆ ಎದುರಾಗಿದೆ ಇನ್ನು ಸ್ವಲ್ಪ ದಿನ ಹೀಗೆಯೇ ಕಳೆದರೆ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಸಹ ಸ್ಥಗಿತವಾಗಿ ಜಿಲ್ಲೆಯ ಕಬ್ಬು ಬೆಳೆಗಾರ ರೈತ ನೇಣಿಗೆ ಶರಣಾಗುವ ಅನಿವಾರ್ಯತೆಗೆ ನೂಕಲ್ಪಡುತ್ತಾರೆ ಎಂದು ಆತಂಕಿಸಿದರು.ಇದಕ್ಕೆ ಮಧ್ಯಪ್ರವೇಶಿಸಿ ಉತ್ತರಿಸಿದ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ, ಬ್ಯಾಂಕ್ ಲಕ್ಷಾಂತರ ರೈತರನ್ನು ಹೊಂದಿದೆ. ಅವರ ಹಿತವನ್ನು ನಾವು ಇಲ್ಲಿ ಬಲಿಕೊಡುವಂತಿಲ್ಲ. ಕಾರ್ಖಾನೆಗಾಗಿ ಸಾಲ ಮರುಪಾವತಿಯಲ್ಲಿ ಅತಿಯಾದ ಸರಳೀಕರಣ, ಮನ್ನಾದಂಥ ಕ್ರಮಗಳು ಬ್ಯಾಂಕ್ ಗೆ ಬೀಗ ಜಡಿಯುವ ಪರಿಸ್ಥಿತಿ ತಂದೊಡ್ಡಲಿದೆ ಅದಕ್ಕೆ ನಾನು ಆಸ್ಪದ ಕೊಡೋಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಇದಕ್ಕೆಲ್ಲ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕಾರ್ಖಾನೆಯ ಈ ದುಸ್ಥಿತಿಗೆ ಕಾರಣರಾರು ಎಂಬುವುದನ್ನು ಯೋಚಿಸ ಬೇಕಿದೆ ಅದಕ್ಕಾಗಿ ತನಿಖೆಯ ಅಗತ್ಯವಿದೆ. ಜೊತೆಗೆ ಬ್ಯಾಂಕ್ ಉಳಿಸುವದೂ ನಮ್ಮೆಲ್ಲರ ಕರ್ತವ್ಯ ಈ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸೂಕ್ತ ಪರಿಹಾರ ಕಂಡುಕೊಳ್ಳೋಣ ಎಂದು ಸಲಹೆಯಿತ್ತರು.