ಹೊರಗುತ್ತಿಗೆ ನೌಕರರ ನೋಂದಣಿಗೆ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ

KannadaprabhaNewsNetwork | Published : Mar 12, 2025 12:46 AM

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ನೋಂದಣಿ ಪ್ರಾರಂಭಿಸುವ ಹಾಗೂ ಸೊಸೈಟಿ ನೋಂದಣಿ ಪ್ರಕ್ರಿಯೆಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಂಘ ಸ್ಥಾಪಿಸಲು ಹೊರಗುತ್ತಿಗೆ ಕಾರ್ಮಿಕರ ನೋಂದಣಿಗಾಗಿ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ನೊಂದಣಿ ಪ್ರಾರಂಭಿಸುವ ಹಾಗೂ ಸೊಸೈಟಿ ನೊಂದಣಿ ಪ್ರಕ್ರಿಯೆಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೀದರ್ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ಶ್ರೇಯೋಭಿವೃದ್ಧಿಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಂಘ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಾಪನೆಯಾಗಿದೆ. ಹೊರಗುತ್ತಿಗೆ ನೌಕರರಿಗೆ ಅವಶ್ಯ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸಂಘ ರಚಿಸಲು ಸರ್ಕಾರ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳು, ನಗರ, ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುವ ಹೊರಗುತ್ತಿಗೆ ನೌಕರರ ಮಾಹಿತಿಯನ್ನು 2-3 ದಿನದೊಳಗೆ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಎರಡೂವರೆ ಸಾವಿರದಿಂದ 3 ಸಾವಿರ ಹೊರಗುತ್ತಿಗೆ ನೌಕರರು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೂ ಆಡಳಿತ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಏಜೆನ್ಸಿಗಳಿಂದ ಸಂಕಷ್ಟಗಳಿಗೆ ನಿಗದಿತ ಕಾಲಮಿತಿಯಲ್ಲಿ ಇ.ಎಸ್.ಐ ಹಾಗೂ ಪಿ.ಎಫ್ ಹಣ ಪಾವತಿಯಾಗದಿರಬಹುದು. ಅದರಲ್ಲೂ ಮಹಿಳಾ ನೌಕರರಿಗೆ ಅಧಿಕಾರಿಗಳು, ಇತರರಿಂದ ಕಿರುಕುಳವಾಗಬಹುದು. ಇದನ್ನು ತಪ್ಪಿಸಿ ಹೊರಗುತ್ತಿಗೆ ನೌಕರರಿಗೆ ಜೀವನ ಭದ್ರತೆಯನ್ನು ಒದಗಿಸಲು ಅನುಕೂಲವಾಗುವಂತೆ ಸಂಘ ಸ್ಥಾಪಿಸಬೇಕಿದೆ ಎಂದರು.

ಶಿಕ್ಷಣ, ಆರೋಗ್ಯ, ಬ್ಯಾಂಕ್‌ಗಳು, ಕೈಗಾರಿಕೆಗಳು ಹಾಗೂ ಚಾಮುಲ್ ಸೇರಿದಂತೆ ಇತರೆಡೆ ಹೆಚ್ಚಿನ ಹೊರಗುತ್ತಿಗೆ ನೌಕರರಿದ್ದಾರೆ. ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಹೊರಗುತ್ತಿಗೆ ನೌಕರರು ವಂಚಿತರಾಗದಂತೆ ವ್ಯವಸ್ಥಿತ ನೋಂದಣಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು. ಸರ್ಕಾರಿ ಕೆಲಸ ಸಿಗದ ನಿರುದ್ಯೋಗಿಗಳಿಂದ ಹೊರಗುತ್ತಿಗೆ ಸೇವೆಗೂ ಸಾಕಷ್ಟು ಬೇಡಿಕೆ ಇದ್ದು, ಸರ್ಕಾರದ ಪ್ರತಿನಿಧಿಗಳಾಗಿ ಕೆಲಸ ಮಾಡುವ ನಾವೆಲ್ಲರೂ ಹೊರಗುತ್ತಿಗೆ ನೌಕರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನೆರವಾಗಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಂಘ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಲಿದ್ದು, ಸಂಘಕ್ಕೆ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ನಿರ್ದೇಶಕ ಮಂಡಳಿಯ ಅಗತ್ಯವಿದೆ. ಹೆಚ್ಚಿನ ಹೊರಗುತ್ತಿಗೆ ನೌಕರರಿರುವ ಇಲಾಖೆಗಳ ಸಿಬ್ಬಂದಿಯನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗುವುದು. ಹೊರಗುತ್ತಿಗೆ ನೌಕರರ ಒಟ್ಟಾರೆ ನೊಂದಣಿ ಪ್ರಕ್ರಿಯೆ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿರುವುದರಿಂದ ಕ್ರಮಬದ್ಧ ನೊಂದಣಿಗೆ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಸಿಇಒ ಮೋನಾ ರೋತ್, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಮಹೇಶ್, ಸಹಕಾರ ಸಂಘಗಳ ಉಪನಿಬಂಧಕರಾದ ಜ್ಯೋತಿ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ವಿ. ಸುಧಾ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share this article