ಕನ್ನಡಪ್ರಭ ವಾರ್ತೆ ತುಮಕೂರುಮಾಗಡಿ ತಾಲೂಕಿಗೆ ನೀರು ಹರಿಸುವ ಉದ್ದೇಶದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು. ಈ ಯೋಜನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಷಡ್ಯಂತರ ಮಾಡಿದ್ದಾರೆ ಎಂದು ಆರೋಪಿಸಿ ಮುಖಂಡರು ಡಿ.ಕೆ.ಶಿವಕುಮಾರ್ ಅಣುಕ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ 25 ಟಿಎಂಸಿ ನೀರನ್ನೂ ಈವರೆಗೆ ಪಡೆಯಲಾಗಿಲ್ಲ, ಈ ಪರಿಸ್ಥಿತಿಯಲ್ಲಿ ನಮ್ಮ ಪಾಲಿನ ನೀರನ್ನು ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಷಡ್ಯಂತರ ಮಾಡಿದ್ದಾರೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ, ಈ ಕೂಡಲೇ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ತುಮಕೂರು ನಗರ ವಿಸ್ತಾರವಾಗಿ ಬೆಳೆದಿದ್ದು, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ನಗರದ ಸುತ್ತಾ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿದೆ. ಹೀಗಿರುವಾಗ ಜಿಲ್ಲೆಗೆ ಹಂಚಿಕೆಯಾದ ನೀರನ್ನೂ ಮಾಗಡಿಗೆ ತೆಗೆದುಕೊಂಡು ಹೋಗುವ ಹುನ್ನಾರವನ್ನು ವಿರೋಧಿಸುತ್ತೇವೆ. ಇತ್ತಿಚೇಗೆ ಕೆಡಿಪಿ ಸಭೆಯಲ್ಲೂ ಲಿಂಕ್ ಕೆನಾಲ್ ವಿರುದ್ಧ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ನಿರ್ಣಯ ತೆಗೆದುಕೊಂಡಿದ್ದರು ಎಂದರು.
ಗುಬ್ಬಿ ತಾಲೂಕು ಡಿ.ರಾಂಪುರದ ಹೆಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಕಾಮಗಾರಿ ಸ್ಥಗಿತಗೊಳಿಸಿದಿದ್ದರೆ ತುಮಕೂರು ಜಿಲ್ಲೆ ಬಂದ್‌ಗೆ ಕರೆ ನೀಡಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.ಮಧುಗಿರಿ ತಾಲೂಕು ನಿಟ್ರಹಳ್ಳಿಯ ವಿಶ್ವಕರ್ಮ ಪೀಠದ ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿ, ನೀರಿಲ್ಲದೆ ಬರ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಯ ಜನರ ಕುಡಿಯುವ ನೀರಿಗೆ ಹೇಮಾವತಿ ನೀರೇ ಆಧಾರವಾಗಿದೆ. ನಮ್ಮ ನೀರನ್ನೂ ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗುವುದನ್ನು ವಿರೋಧಿಸಿ ಜಿಲ್ಲೆಯ ಎಲ್ಲಾ ಮಠಾಧೀಶರು ನಿರ್ಧಾರ ಕೈಗೊಂಡಿದ್ದೇವೆ. ನೀರಿನ ಹೋರಾಟಕ್ಕೆ ನಾವು ಜೀವ ಕೊಡಲೂ ಸಿದ್ಧ. ಸರ್ಕಾರ ಕೂಡಲೇ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಕೆಲಸ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಣುಕು ಶವಯಾತ್ರೆ ನಡೆಸಿದ ಹೋರಾಟಗಾರರು ನಂತರ ಅದನ್ನು ಪ್ರತಿಭಟನೆ ನಡೆಯುವ ಗುಬ್ಬಿ ತಾಲೂಕು ಡಿ.ರಾಂಪುರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ತೆಗೆದಿದ್ದ ಹೇಮಾವತಿ ಕಾಲುವೆಯಲ್ಲಿ ಮಣ್ಣು ಮಾಡಿದರು.ಕನ್ನಡ ಮತ್ತು ಸಂಸ್ಕೃತಿ ವೇದಿಕೆ ರಾಜ್ಯಾಧ್ಯಕ್ಷ ಕನ್ನಡ ಪ್ರಕಾಶ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಸವರಾಜು, ಅಖಿಲ ಕರ್ನಾಟಕ ಕಾರ್ಮಿಕರ ಪ್ರಜಾ ವೇದಿಕೆ ಅಧ್ಯಕ್ಷ ಮೀಸೆ ಸತೀಶ್, ನಗರ ಸಭೆ ಮಾಜಿ ಸದಸ್ಯ ಟಿ.ಎಚ್.ಬಾಲಕೃಷ್ಣ, ವಿವಿಧ ಸಂಘಟನೆಗಳ ಮುಖಂಡರಾದ ರಾಮಚಂದ್ರರಾವ್, ಶಬ್ಬೀರ್ ಆಹ್ಮದ್, ಉದಯಕುಮಾರ್, ವೀರೇಶ್ ಪ್ರಸಾದ್, ಎಚ್.ಡಿ.ರಾಮಲಿಂಗಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.